ಈ ವರ್ಷಾರಂಭದಲ್ಲಿ 2021-22ರ ಆರ್ಥಿಕ ವರ್ಷದ ಐಟಿಆರ್ ಸಲ್ಲಿಸಲು ಮಾರ್ಚ್ 31ನೇ ತಾರೀಖಿನವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿಂದೆ 2021ರ ಡಿಸೆಂಬರ್ ತಿಂಗಳಿನವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಕೊರೋನಾ ಕಾರಣದಿಂದ ಐಟಿಆರ್ ಸಲ್ಲಿಕೆ ದಿನಾಂಕ ಮುಂದೂಡಲ್ಪಟ್ಟಿದೆ.
ಒಂದು ವೇಳೆ 2022ರ ಮಾರ್ಚ್ 31ನೇ ತಾರೀಖಿನೊಳಗೆ ಐಟಿಆರ್ ಸಲ್ಲಿಸದಿದ್ದರೆ ಏನಾಗಬಹುದು ಎಂಬುದರ ಉತ್ತರ, ಕಠಿಣ ಕಾನೂನು ಕ್ರಮ. ಹೌದು, ಈ ದಿನಾಂಕದೊಳಗೂ ತೆರಿಗೆದಾರರು ಐಟಿಆರ್ ಫೈಲ್ ಮಾಡದಿದ್ದರೆ ಕನಿಷ್ಠ 3 ವರ್ಷದಿಂದ 7ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನೀವು ಕಡೆಯ ದಿನಾಂಕದೊಳಗೆ ಐಟಿಆರ್ ಸಲ್ಲಿಸಲು ವಿಫಲವಾದರೆ ಆದಾಯ ತೆರಿಗೆ ಇಲಾಖೆ, ತೆರಿಗೆ ಮತ್ತು ಬಡ್ಡಿಗೆ ಹೆಚ್ಚುವರಿಯಾಗಿ ತೆರಿಗೆದಾರರ ನಿಜವಾದ ಆದಾಯ ತೆರಿಗೆ ಹೊರಹೋಗುವಿಕೆಯ ಮೇಲೆ ಶೇಕಡಾ 50 ರಿಂದ 200 ರಷ್ಟು ದಂಡವನ್ನು ವಿಧಿಸಬಹುದು. ಸುಲಭವಾಗಿ ಅರ್ಥೈಸುವುದಾದರೆ, ತೆರಿಗೆ ಸಲ್ಲಿಸಲು ವಿಫಲವಾದರೆ 50% ನಿಂದ 200% ದಂಡ ಕಟ್ಟಬೇಕಾಗುತ್ತದೆ.
ಗಡುವಿನೊಳಗೆ ಐಟಿಆರ್ ಸಲ್ಲಿಸದವರಿಗೆ ಇಲಾಖೆ ನೋಟೀಸ್ ಕಳುಹಿಸುತ್ತದೆ, ಅದಾದ ನಂತರವೂ ಐಟಿಆರ್ ಫೈಲ್ ಮಾಡದಿದ್ದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಭಾರತ ಸರ್ಕಾರಕ್ಕಿದೆ ಎಂದು ತೆರಿಗೆ ಮತ್ತು ಹೂಡಿಕೆ ತಜ್ಞರಾದ ಬಲ್ವಂತ್ ಜೈನ್ ತಿಳಿಸಿದ್ದಾರೆ.
ಮೊದಲೇ ಹೇಳಿದಂತೆ ಗಡುವು ಮೀರಿದರೆ, ಪ್ರಸ್ತುತ ಆದಾಯ ತೆರಿಗೆ ನಿಯಮಗಳ ಪ್ರಕಾರ ಕನಿಷ್ಠ 3 ವರ್ಷ ಮತ್ತು ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಐಟಿಆರ್ ಸಲ್ಲಿಸಲು ವಿಫಲವಾದ ಪ್ರತಿಯೊಂದು ಸಂದರ್ಭದಲ್ಲೂ ಇಲಾಖೆಯು ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೆ ಎಂದಲ್ಲ. ತೆರಿಗೆ ಮೊತ್ತ 10,000 ರೂ. ಮೀರಿದರೆ ಮಾತ್ರ ಆದಾಯ ಇಲಾಖೆಯು ಕಾನೂನು ಕ್ರಮ ಜರುಗಿಸಬಹುದು.