ಅಂತರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್ ಇಂದು ಉದ್ಯೋಗಕ್ಕೆ ಅನಿವಾರ್ಯವಾಗಿದೆ. ಹೀಗಾಗಿಯೇ ಇಂದು ಹಳ್ಳಿಗಳಲ್ಲೂ ಸಹ ಕಾನ್ವೆಂಟ್ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಇಂತಹ ಶಾಲೆಗಳಿಗೆ ಸೇರ್ಪಡೆಗೊಳಿಸಲು ಬಯಸುತ್ತಾರೆ.
ಆದರೆ ಇಲ್ಲೊಬ್ಬ ಆಟೋ ಚಾಲಕರಿಗೆ ಇಂಗ್ಲೀಷ್ ಭಾಷೆಯ ಮೇಲೆ ಇರುವ ಹಿಡಿತ ಕಂಡು ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಮಹಾರಾಷ್ಟ್ರದ ಅಮರಾವತಿಯ ಯಾದವ್ ಎಂಬ ಈ ಆಟೋ ಚಾಲಕ, ಪ್ರಯಾಣಿಕರೊಂದಿಗೆ ಸುಲಲಿತವಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದಾರೆ.
ಅಲ್ಲದೆ ಅಂತರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್ ಎಷ್ಟು ಅನಿವಾರ್ಯ ಎಂಬುದನ್ನು ತಿಳಿಸುವ ಚಾಲಕ ಯಾದವ್, ಇಂಗ್ಲೀಷ್ ಕಲಿತರೆ ಲಂಡನ್, ಅಮೆರಿಕಾ ಸೇರಿದಂತೆ ಎಲ್ಲಾ ಕಡೆಯೂ ಹೋಗಬಹುದು. ಹೀಗಾಗಿ ಎಲ್ಲರೂ ಸಹ ಇಂಗ್ಲಿಷ್ ಕಲಿಯಬೇಕು ಎಂದು ಹೇಳಿದ್ದಾರೆ.
ಭೂಷಣ್ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಆಟೋ ಚಾಲಕ ಇಂಗ್ಲಿಷ್ನಲ್ಲಿ ಮಾತನಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಳಿವಯಸ್ಸಿನಲ್ಲೂ ಸಹ ಭಾಷೆ ಕಲಿಯಲು ಅವರಿಗಿರುವ ಆಸಕ್ತಿಯನ್ನು ಕೊಂಡಾಡಿದ್ದಾರೆ.
ಕೆಲ ತಿಂಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಘಟನೆ ಒಂದರ ವಿಡಿಯೋ ಕೂಡ ವೈರಲ್ ಆಗಿತ್ತು. ಇದರಲ್ಲಿ ಯುಕೆಯಿಂದ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ ಹಣ ಪಡೆಯಲು ಎಟಿಎಂ ಹುಡುಕುತ್ತಿರುವ ವೇಳೆ ಅಶ್ರಫ್ ಎಂಬ ಆಟೋ ಚಾಲಕರು ಇಂಗ್ಲೀಷ್ ನಲ್ಲಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ಅಲ್ಲದೆ ಸ್ವತಃ ತಮ್ಮ ಆಟೋದಲ್ಲಿ ಕರೆದುಕೊಂಡು ಎಟಿಎಂ ಬಳಿ ಬಿಟ್ಟಿದ್ದರು.