ದೇಶದಲ್ಲಿ ಬುಲ್ಡೋಜರ್ ಬಳಕೆ ಬಗ್ಗೆ ವಾಕ್ಸಮರ ನಡೆಯುತ್ತಿರುವ ನಡುವೆ ಬಿಜೆಪಿ ಭಾನುವಾರ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ. ತುರ್ಕ್ ಮನ್ ಗೇಟ್ ನಲ್ಲಿ ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್ ಬಳಕೆಗೆ ಮೊದಲು ಆದೇಶ ನೀಡಿದ್ದೇ ಇಂದಿರಾ ಗಾಂಧಿ ಎಂದು ಹೇಳಿದೆ.
ಸರಣಿ ಟ್ವೀಟ್‌ಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಅವರು, ಕಾಂಗ್ರೆಸ್ ಪಕ್ಷದ ಮನೀಶ್ ತಿವಾರಿಯಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಎಲ್ಲರೂ ವಿಸ್ಮೃತಿಯಿಂದ(Amnesia) ಬಳಲುತ್ತಿದ್ದಾರೆಯೇ? ಅಥವಾ ಈ ಬಗ್ಗೆ ಅವರಿಗೆ ತಿಳಿದಿಲ್ಲವೇ? ನಾಜಿಗಳು ಮತ್ತು ಯಹೂದಿಗಳನ್ನು ಮರೆತುಬಿಡಿ, ಭಾರತದಲ್ಲಿ ತುರ್ಕ್ ಮನ್ ಗೇಟ್ ನಲ್ಲಿ ಅಲ್ಪಸಂಖ್ಯಾತರ ಮೇಲೆ ಬುಲ್ಡೋಜರ್ ಗಳನ್ನು ಬಳಸಲು ಮೊದಲು ಆದೇಶಿಸಿದವರು ಇಂದಿರಾ ಗಾಂಧಿ ಎಂದು ತಿಳಿಸಿದ್ದಾರೆ.
ಏಪ್ರಿಲ್ 1976 ರಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಮಗ ಸಂಜಯ್ ಗಾಂಧಿ, ಮುಸ್ಲಿಂ ಪುರುಷರು ಮತ್ತು ಮಹಿಳೆಯರನ್ನು ಬಲವಂತದ ಸಂತಾನಹರಣಕ್ಕೆ ಒಳಗಾಗುವಂತೆ ಒತ್ತಾಯಿಸಿದ್ದರು. ಅವರು ಪ್ರತಿಭಟಿಸಿದಾಗ ತುರ್ಕ್ ಮನ್ ಗೇಟ್ ನಲ್ಲಿ ಬುಲ್ಡೋಜರ್ ಗಳನ್ನು ಹರಿಸಲಾಯಿತು. ಘಟನೆಯಲ್ಲಿ 20 ಜನರು ಸತ್ತರು ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ಟ್ವಿಟರ್ ನಲ್ಲಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ನಾಜಿಗಳು, ಯಹೂದಿಗಳ ವಿರುದ್ಧ ವ್ಯಾಪಕವಾಗಿ ಬುಲ್ಡೋಜರ್ ಅನ್ನು ಬಳಸಿದರು. ನಂತರ ಯಹೂದಿಗಳು ಅದನ್ನು ಪ್ಯಾಲೆಸ್ಟೀನಿಯನ್ನರ ವಿರುದ್ಧ ಬಳಸಿದರು. ಭಾರತವು ಈಗ ಅದನ್ನು ತನ್ನದೇ ಆದ ಅಲ್ಪಸಂಖ್ಯಾತರ ವಿರುದ್ಧ ಬಳಸುತ್ತಿದೆ ಎಂದು ದೂರಿದ್ದರು.
ಇದಕ್ಕೆ ಅಮಿತ್ ಮಾಳವಿಯಾ ತಿರುಗೇಟು ನೀಡಿ, ಕಾಂಗ್ರೆಸ್ ನಿಂದ ನಾಜಿಗಳೊಂದಿಗಿನ ಹೋಲಿಕೆ ಇಂದಿರಾ ಗಾಂಧಿಯವರ ಬಳಿ ನಿಲ್ಲಬೇಕು. ಮೊದಲು ಬುಲ್ಡೋಜರ್ ಬಳಸಿದ್ದೇ ಅವರು ಎಂದು ಹೇಳಿದ್ದಾರೆ.