
ಅಕ್ಟೋಬರ್ – ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್ ಹಾಗೂ ಐಸಿಸಿ ವಿಶ್ವಕಪ್ 2023ರ ಅಸಮರ್ಪಕ ನಿರ್ವಹಣೆ ಹಾಗೂ ವೇಳಾಪಟ್ಟಿ ಗೊಂದಲದ ಕಾರಣದಿಂದಾಗಿ ಬಿಸಿಸಿಐ ಸದ್ಯ ನ್ಯೂಸ್ನಲ್ಲಿದೆ, ಶ್ರೀಲಂಕಾದ ಭಾರೀ ಮಳೆ ಏಷ್ಯಾಕಪ್ ಮೇಲೆ ತೀವ್ರ ಪರಿಣಾಮ ಬೀರಿದೆ. ಇತ್ತ ಭಾರತೀಯ ಕ್ರಿಕೆಟ್ ಮಂಡಳಿ ಸಾಕಷ್ಟು ತಡವಾಗಿ ಟಿಕೆಟ್ ಮಾರಾಟ ಆರಂಭಿಸಿದ್ದರಿಂದ ವಿಶ್ವಕಪ್ ಪಂದ್ಯದಲ್ಲಿ ಟಿಕೆಟ್ಗಳ ಕೊರತೆ ಉಂಟಾಗಿದೆ.
ಅಹಮದಾಬಾದ್ನಲ್ಲಿ ಭಾರತ ಹಾಗೂ ಪಾಕಿಸ್ತಾನದ ಹೈ ಪ್ರೊಫೈಲ್ ಮ್ಯಾಚ್ಗಳು ಸೇರಿದಂತೆ ಭದ್ರತಾ ಸಮಸ್ಯೆಯ ಕಾರಣದಿಂದಾಗಿ ಬಿಸಿಸಿಐ ಕೆಲವು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಬಿಸಿಸಿಐನ ಈ ಎಲ್ಲಾ ಗೊಂದಲಗಳು ಹಾಗೂ ತಪ್ಪು ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಂಡು ವೆಂಕಟೇಶ್ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಬಿಸಿಸಿಐ ನಡೆಯನ್ನು ಹೀಯಾಳಿಸಿದ್ದಾರೆ. ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳಿಗೆ ಸೂಕ್ತವಾಗಿ ಅವಕಾಶ ನೀಡಬೇಕು ಎಂದು ಬಿಸಿಸಿಐನ್ನು ಒತ್ತಾಯಿಸಿದ್ದಾರೆ.
ನಾವು ವಿಶ್ವಕಪ್ ಮುಂದಾಳತ್ವ ವಹಿಸುವ ವಿಚಾರದಲ್ಲಿ ಎಡವುತ್ತಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ . ಮೊದಲ ಹಂತದ ವೇಳಾಪಟ್ಟಿಯಲ್ಲಿ ಅಸಮಂಜಸ ವಿಳಂಬ ಉಂಟಾಗಿದೆ. ಇದು ಸಾಲದು ಎಂಬಂತೆ ಐದು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ವಿಶ್ವಕಪ್ ಪಂದ್ಯಕ್ಕೆ ಉಂಟಾಗಿರುವ ಟಿಕೆಟ್ ವಿಳಂಬದಿಂದಾಗಿ ಬಿಸಿಸಿಐ ಬ್ಲಾಕ್ ಟಿಕೆಟ್ ಮಾರಾಟಕ್ಕೆ ಪುಷ್ಠಿ ನೀಡಿದಂತೆ ಆಗುತ್ತದೆ ಎಂದು ವೆಂಕಟೇಶ್ ಪ್ರಸಾದ್ ಬೇಸರ ಹೊರಹಾಕಿದ್ದಾರೆ.