ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ. ಹೀಗೆ ಅನೇಕ ಮಾತುಗಳನ್ನು ನೀವು ಕೇಳಿರಬಹುದು.
ಗರ್ಭಿಣಿಯರು ತಮ್ಮ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಒಳಗಿನ ಮಗುವಿನ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮಗುವಿನ ಮೇಲೆ ಪರಿಣಾಮ ಉಂಟಾಗುತ್ತದೆ.
ಗರ್ಭಾವಸ್ಥೆಯಲ್ಲಿ ತಂಬಾಕು ಸೇವನೆ ಮಾಡಬಾರದು. ಗರ್ಭಿಣಿಯರು ತಂಬಾಕು ಸೇವನೆ ಮಾಡುವುದರಿಂದ ಮಾರಕ ಪರಿಣಾಮ ಉಂಟಾಗುತ್ತದೆ.
ಗರ್ಭಿಣಿಯರಾಗುವ ಮೊದಲು ತಂಬಾಕು ಸೇವನೆ ಬಿಡಬೇಕು. ತಂಬಾಕು ಸೇವನೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿದ್ದು, ಗರ್ಭಿಣಿಯರು ತಂಬಾಕು ಸೇವನೆ ಮಾಡುವುದರಿಂದ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.
ತಂಬಾಕು ಸೇವನೆ ಮಾಡುವುದರಿಂದ ಅದರಲ್ಲಿನ ರಾಸಾನಿಕ, ವಿಷಯುಕ್ತ ಪದಾರ್ಥಗಳು, ಕ್ಯಾನ್ಸರ್ ಕಾರಕ ಹೊಗೆ ಮೊದಲಾದವು ಭ್ರೂಣದ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಅವಧಿಗೂ ಮೊದಲೇ ಹೆರಿಗೆ, ಜನಿಸುವ ಮೊದಲೇ ಸಾವು, ಕಡಿಮೆ ತೂಕ, ಶ್ವಾಸಕೋಶ, ಹೃದಯ ಸಂಬಂಧಿ ದೋಷಗಳು ಕಾಣಿಸಿಕೊಳ್ಳಬಹುದಾಗಿದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ತಂಬಾಕು ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳಿತು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.