ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ವೇಳೆ ಮಾಜಿ ಕಾರ್ಪೊರೇಟರ್ ಪತಿ ಅಂಬಿಕಾಪತಿ ಎಂಬುವವರಿಗೆ ಸೇರಿದ ಫ್ಲ್ಯಾಟ್ ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಸಂಗ್ರಹವಾದ ಹಣವಿದು ಎಂದು ಕಿಡಿಕಾರಿದ್ದಾರೆ.
ಅಂಬಿಕಾಪತಿ ಅವರ ಫ್ಲ್ಯಾಟ್ ನಲ್ಲಿ 40 ಕೋಟಿಗೂ ಹೆಚ್ಚು ಹಣ ಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಅಶ್ವತ್ಥನಾರಾಯಣ, ಇದು ಕಲೆಕ್ಷನ್ ದುಡ್ಡು, ಪರ್ಸೆಂಟೇಜ್ ಹಣ. ಗುತ್ತಿಗೆದಾರರಿಗೆ ಟಾರ್ಚರ್ ಕೊಟ್ಟು ಕಲೆಕ್ಷನ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಣ ಯಾರಿಗೆ ಹೋಗಬೇಕು ಎಂಬುದನ್ನು ಗುತ್ತಿಗೆದಾರರು ಹೇಳಬೇಕಿದೆ. ಇವತು ಪತ್ತೆಯಾದ ಹಣ ಕೇವಲ ಸ್ಯಾಂಪಲ್ ಅಷ್ಟೇ. ಅಂಬಿಕಾಪತಿ ಹಾಗೂ ಅವರ ಪತ್ನಿ ಅಶ್ವತ್ಥಮ್ಮ ಸಣ್ಣ ಪ್ರಮಾಣದಲ್ಲಿ ಹಣ ಸಂಗ್ರಹಿಸಿಟ್ಟಿದ್ದರು. ಅದು ಯಾರ ಕೈಗೆ ಸೇರಬೇಕಿತ್ತು ಎಂಬುದನ್ನು ಅವರೇ ಹೇಳಬೇಕು. ಇದು ಎಟಿಎಂ ಸರ್ಕಾರ ಎಂಬುದು ಮತ್ತೆ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.