ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. 9 ತಿಂಗಳುಗಳ ಕಾಲ ಮಗುವಿನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ತಾಯಿ ತೆಗೆದುಕೊಳ್ಳಬೇಕು. ಪಾಲಕ್ ಸೊಪ್ಪು ಕೂಡ ಅತ್ಯಂತ ಆರೋಗ್ಯಕರ ಸೊಪ್ಪು. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫೋಲಿಕ್ ಆಮ್ಲದ ಜೊತೆಗೆ ಅನೇಕ ಜೀವಸತ್ವಗಳಿವೆ. ಆದರೆ ಗರ್ಭಿಣಿಯರು ಇದನ್ನು ಸೇವನೆ ಮಾಡುವುದು ಅಪಾಯಕಾರಿಯಾಗಬಹುದು.
ಆರೋಗ್ಯ ತಜ್ಞರು ಹೇಳುವುದೇನು?
ಗರ್ಭಾವಸ್ಥೆಯ ಕೆಲವು ಅವಧಿಯಲ್ಲಿ ಪಾಲಕ್ ಸೊಪ್ಪು ಸೇವಿಸುವುದು ಗರ್ಭಿಣಿಯ ಆರೋಗ್ಯಕ್ಕೆ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಪಾಲಕ್ ಸೊಪ್ಪನ್ನು ಯಾವಾಗ ಮತ್ತು ಯಾವ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಬೇಕು? ಯಾವ ಸಮಯದಲ್ಲಿ ಸೇವನೆ ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು.
ಗರ್ಭಾವಸ್ಥೆಯ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಪಾಲಕ್ ಸೊಪ್ಪನ್ನು ಸೇವಿಸಬಾರದು. ಈ ಸಮಯದಲ್ಲಿ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಅಪಾಯ ಹೆಚ್ಚುತ್ತದೆ. ಪಾಲಕ್ ಸೊಪ್ಪನ್ನು ತಿನ್ನಲೇಬೇಕು ಎನಿಸಿದರೆ ಸಾಕಷ್ಟು ನೀರು ಕುಡಿಯಬೇಕು.
ಮೂರನೇ ತ್ರೈಮಾಸಿಕದಲ್ಲಿ ಅತಿಯಾಗಿ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಎದೆಯುರಿ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಸಹ ಇದು ಕಾರಣವಾಗುತ್ತದೆ.
ಪಾಲಕ್ ಸೊಪ್ಪಿನಲ್ಲಿ ಸ್ಯಾಲಿಸಿಲೇಟ್ ಎಂಬ ಅಂಶವಿದೆ. ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿ ಪಾಲಕ್ ಸೊಪ್ಪನ್ನು ತಿಂದರೆ ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಅಷ್ಟೇ ಅಲ್ಲ ಕೊನೆಯ ತ್ರೈಮಾಸಿಕದಲ್ಲಿ ಪಾಲಕ್ ಸೊಪ್ಪಿನ ಸೇವನೆಯಿಂದ ಮಗುವಿನ ಆರೋಗ್ಯಕ್ಕೆ ಹಾನಿಯಾಗುವ ಆತಂಕವಿದೆ.
ಪಾಲಕ್ ಸೊಪ್ಪು ಇಂತಹ ಗುಣಗಳನ್ನು ಹೊಂದಿದ್ದು, ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸುತ್ತದೆ. ಪಾಲಕ್ ಮೂತ್ರವರ್ಧಕ ಆಹಾರಗಳ ಪಟ್ಟಿಯಲ್ಲಿ ಬರುತ್ತದೆ.
ಪಾಲಕ್ ಸೊಪ್ಪಿನಲ್ಲಿ ಫೋಲಿಕ್ ಆಮ್ಲ ಹೇರಳವಾಗಿದೆ. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ, ಆದ್ದರಿಂದ ತಾಯಿಯು ಮೊದಲ ತ್ರೈಮಾಸಿಕದಲ್ಲಿ ಪಾಲಕ್ ಸೇವಿಸಬಹುದು. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಪಾಲಕ್ ಅನ್ನು ಮಿತಿಯೊಳಗೆ ಸೇವಿಸಿದರೆ ಅದು ಹಾನಿಯನ್ನುಂಟುಮಾಡುವುದಿಲ್ಲ.
ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿ ದಿನಕ್ಕೆ ಅರ್ಧ ಕಪ್ ಪಾಲಕ್ ಅನ್ನು ತಿನ್ನಬಹುದು. ಪಾಲಕ ಸೂಪ್ ಸೇವನೆ ಕೂಡ ಸೂಕ್ತ. ಆದರೆ ಅದರ ಪ್ರಮಾಣ ಅರ್ಧ ಕಪ್‌ಗಿಂತ ಹೆಚ್ಚು ಇರಬಾರದು. ಅಷ್ಟೇ ಅಲ್ಲ ಪಾಲಕ್ ಸೊಪ್ಪನ್ನು ಪ್ರತಿದಿನ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.