ಕಡಲೆಹಿಟ್ಟು ತುಂಬಾ ಸುಲಭವಾಗಿ ಸಿಗುವಂತಹ ಹಾಗೂ ಬಳಸಬಹುದಾದ ಸೌಂದರ್ಯ ವರ್ಧಕ. ತ್ವಚೆಯ ರಕ್ಷಣೆ ಮಾಡುವ ಈ ಕಡಲೆಹಿಟ್ಟನ್ನು ಸಾಬೂನು, ಫೇಶಿಯಲ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದಂತಹ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. ಚರ್ಮದ ಸಣ್ಣ ಪುಟ್ಟ ಸಮಸ್ಯೆ, ನೆರಿಗೆ ಮತ್ತು ಚರ್ಮವು ಕಾಂತಿ ಕಳೆದುಕೊಳ್ಳುವ ಸಮಸ್ಯೆಗೆ ಕಡಲೆಹಿಟ್ಟನ್ನು ಬಳಸಬಹುದು.
ಕಡಲೆ ಹಿಟ್ಟು ನೈಸರ್ಗಿಕ ಕ್ಲೀನರ್. ಇದು ಚರ್ಮದ ಆಳದವರೆಗೂ ಅಡಗಿ ಕುಳಿತಿರುವ ಕೊಳೆಯನ್ನು ಹೊರದಬ್ಬಿ ಸತ್ತ ಕೋಶಗಳನ್ನು ಹೊರಹಾಕುತ್ತದೆ. ಜೊತೆಗೆ ಚರ್ಮಕ್ಕೆ ಬಿಗಿತನವನ್ನು ತಂದುಕೊಡುತ್ತದೆ. ಹೀಗಾಗಿ ಪ್ರತಿನಿತ್ಯ ಸೋಪಿನ ಬದಲಿಗೆ ಕಡಲೆ ಹಿಟ್ಟಿನಲ್ಲಿ ಮುಖ ತೊಳೆಯುವುದು ಒಳಿತು.
ಮೊಡವೆಗಳಿಂದ ತಪ್ಪಿಸಿಕೊಳ್ಳಲು ತೇಯ್ದ ಗಂಧಕ್ಕೆ ಕಡಲೆ ಹಿಟ್ಟು, ಹಾಲು ಸೇರಿಸಿ ಪ್ರತಿನಿತ್ಯ ಹಚ್ಚಿಕೊಂಡರೆ ಸಮಸ್ಯೆ ದೂರವಾಗುತ್ತದೆ.
ಎಣ್ಣೆ ಚರ್ಮವಾಗಿದ್ದರೆ ಕಡಲೆ ಹಿಟ್ಟಿನಿಂದ ಮುಖ ತೊಳೆದುಕೊಳ್ಳುವುದು ಉತ್ತಮ. ಒಣ ಚರ್ಮವಾದರೆ ಕಡಲೆ ಹಿಟ್ಟಿನಿಂದ ಮುಖ ತೊಳೆದ ನಂತರ ಬಾಡಿ ಲೋಶನ್ ಹಚ್ಚಿಕೊಳ್ಳಬೇಕು.
ವಾರಕ್ಕೆ ಮೂರು ಬಾರಿ ಕಡಲೆ ಹಿಟ್ಟು ಹಚ್ಚಿಕೊಳ್ಳುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.