ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು ಪಡೆದುಕೊಳ್ಳಬೇಕಾದರೆ, ನಿಮ್ಮ ಡಯೆಟ್ ನ ಬಗ್ಗೆ ಕಾಳಜಿ ವಹಿಸಲೇಬೇಕು.
ನಿಮ್ಮ ಪ್ರತಿದಿನದ ವ್ಯಾಯಾಮ ಹಾಗೂ ಯೋಗಾಭ್ಯಾಸದ ನಂತರ ಈ ಹೆಲ್ತೀ ಡ್ರಿಂಕ್ಸ್ ಅನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದೇಹದಲ್ಲಿನ ಅಂಗಗಳನ್ನು ಶುದ್ಧೀಕರಿಸಿ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇಲ್ಲಿದೆ ಒಂದು ಡೀಟಾಕ್ಸ್ ಡ್ರಿಂಕ್.
ಬೇಕಾಗುವ ಪದಾರ್ಥಗಳು : ಒಂದು ಮಧ್ಯಮ ಗಾತ್ರದ ಬೀಟ್ ರೂಟ್, 2 ಚಮಚ ನಿಂಬೆ ಹಣ್ಣು ರಸ, 1 ಕಪ್ ದ್ರಾಕ್ಷಿ ರಸ, 2 ಇಂಚಿನಷ್ಟು ಶುಂಠಿ, 1 ಗ್ರೀನ್ ಆ್ಯಪಲ್.
ಮಾಡುವ ವಿಧಾನ : ಮೊದಲು ಬೀಟ್ ರೂಟ್, ಗ್ರೀನ್ ಆ್ಯಪಲ್ ಮತ್ತು ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಗ್ರೀನ್ ಆ್ಯಪಲ್ ಮತ್ತು ಬೀಟ್ ರೂಟ್ ನ ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ. ಶುಂಠಿಯ ಸಿಪ್ಪೆ ತೆಗೆದು ಎಲ್ಲವನ್ನು ಒಟ್ಟಾಗಿ ಜ್ಯೂಸರ್ ನಲ್ಲಿ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಆಮೇಲೆ ಇದನ್ನು ಒಂದು ಗ್ಲಾಸ್ ಜಾರ್ ಗೆ ಶೋಧಿಸಿಕೊಂಡು, ಇದಕ್ಕೆ ನಿಂಬೆ ರಸ ಮತ್ತು ದ್ರಾಕ್ಷಿ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಡೀಟಾಕ್ಸಿಫೈಯಿಂಗ್ ಡ್ರಿಂಕ್ಸ್ ರೆಡಿ. ಬೇಕಿದ್ದಲ್ಲಿ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿಕೊಳ್ಳಬಹುದು.
ನಿಮ್ಮ ದಣಿದ ದೇಹಕ್ಕೆ ಈ ಆರೋಗ್ಯಕರ ಜ್ಯೂಸ್ ತಂಪನ್ನು ನೀಡುವುದರ ಜೊತೆಗೆ ದೇಹದಲ್ಲಿನ ಬೇಡದ ಅಂಶಗಳನ್ನು ಡೀಟಾಕ್ಸ್ ಮಾಡುವ ಮೂಲಕ ಕಲ್ಮಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.