ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. ದೊಡ್ಡ ರೋಗಕ್ಕೆ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಆದ್ರೆ ಸಣ್ಣ-ಸಣ್ಣ ರೋಗಕ್ಕೆ ಮಾತ್ರೆ ಸೇವಿಸುವ ಬದಲು ಮನೆ ಮದ್ದು ಉತ್ತಮ.
ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ಮಹಿಳೆಯರು ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಪ್ರತಿದಿನ ಒಂದು ಬೆಳ್ಳುಳ್ಳಿ ತಿಂದು ಮಾತ್ರೆಯಿಂದ ದೂರವಿರಬಹುದು.
ಬಹುತೇಕ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಆದ್ರೆ ಅನೇಕ ಮಹಿಳೆಯರು ಈ ಬಗ್ಗೆ ಯಾರ ಬಳಿಯೂ ಹೇಳುವುದಿಲ್ಲ. ಹಾಗಾಗಿ ಅದು ದೊಡ್ಡ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಪ್ರತಿದಿನ ಒಂದು ಬೆಳ್ಳುಳ್ಳಿ ಮೊಗ್ಗನ್ನು ಜೇನು ತುಪ್ಪದ ಜೊತೆ ಬೆರೆಸಿ ತಿನ್ನುವುದರಿಂದ ವಿಷಕಾರಿ ಪದಾರ್ಥ ದೇಹದಿಂದ ಹೊರಹೋಗುತ್ತದೆ. ಜೊತೆಗೆ ಮಲಬದ್ಧತೆ ಕಡಿಮೆಯಾಗುತ್ತದೆ.
ಪಾದದ ಬಿರುಕನ್ನು ಮಹಿಳೆಯರು ಸಾಮಾನ್ಯವಾಗಿ ದೊಡ್ಡ ಸಮಸ್ಯೆಯೆಂದು ಪರಿಗಣಿಸುವುದಿಲ್ಲ. ಬೆಳ್ಳುಳ್ಳಿಯಲ್ಲಿ ಪ್ರೋಟೀನ್ ಕೊಬ್ಬಿನ ಅಂಶವಿದ್ದು, ಇದು ಬಿರುಕಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕಾಲಿನ ಬಿರುಕು ದೂರವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಕ್ಕೂ ಬಹಳ ಒಳ್ಳೆಯದು.
ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಮಹಿಳೆಯರು ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪೇಸ್ಟ್ ಸಿದ್ಧಪಡಿಸಿ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಇದ್ರಿಂದ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗುತ್ತದೆ.