ಬೆಂಗಳೂರು : ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಯಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಎಂಬ ಕಳಂಕ ತರಬೇಡಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಜನ ಸಾಮಾನ್ಯರ ಎದೆ ನಡುಗಿಸಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಿನೇ ದಿನೇ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಗೆ ಮತ್ತೊಂದು ನಿದರ್ಶನವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ಪದೇ ಪದೇ ಅನುಸರಿಸುತ್ತಿರುವ ತುಷ್ಟೀಕರಣ, ಓಲೈಕೆ ರಾಜಕಾರಣದ ಫಲವಾಗಿ ಇಂದು ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ, ಸಮಾಜ ಘಾತುಕ ಶಕ್ತಿಗಳಿಗೆ ರೆಕ್ಕೆ ಪುಕ್ಕ ಬಂದು ಕಾನೂನಿನ ಭಯ ಇಲ್ಲದಂತಾಗಿದ್ದು ಪೊಲೀಸರ ನೈತಿಕ ಸ್ಥೈರ್ಯಕ್ಕೆ, ಗುಪ್ತಚರ ಇಲಾಖೆಯ ಕಾರ್ಯದಕ್ಷತೆಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಇಂದಿನ ಬಾಂಬ್ ಬ್ಲಾಸ್ಟ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನ NIAಗೆ ಒಪ್ಪಿಸಬೇಕು. ಕಾಂಗ್ರೆಸ್ ಸರ್ಕಾರ ಇನ್ನು ಮುಂದಾದರೂ ಕರ್ನಾಟಕದ ಜನತೆಗೆ, ಬೆಂಗಳೂರಿಗೆ ಶಾಂತಿ ಸುರಕ್ಷತೆಯ ಗ್ಯಾರೆಂಟಿ ನೀಡುವತ್ತ ಗಮನಹರಿಸಬೇಕು ಎಂದಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಕೂಡ ಸರ್ಕಾರ ತನ್ನ ಉಡಾಫೆ, ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದು ತನಿಖೆ ಮುಗಿಯುವ ಮುನ್ನವೇ ಇದು ಸಿಲಿಂಡರ್ ಬ್ಲಾಸ್ಟ್, ಬಿಸಿನೆಸ್ ದ್ವೇಷದಿಂದ ಮಾಡಿರುವುದು ಎಂದು ಕಥೆ ಕಟ್ಟುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದ ಪ್ರಕರಣದಲ್ಲೂ ಸಹ FSL ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರೂ ಕೂಗಿಯೇ ಇಲ್ಲ, ವಿಡಿಯೋ ತಿರುಚಲಾಗಿದೆ, ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ಕಥೆ ಕಟ್ಟಿದ್ದ ಕಾಂಗ್ರೆಸ್ ನಾಯಕರು ಇಂತಹ ದೇಶದ್ರೋಹಿ ಘಟನೆ ನಡೆದಾಗಲೆಲ್ಲಾ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತದೆ? ತಪ್ಪಿತಸ್ಥರನ್ನು ಹಿಡಿಯದಂತೆ ಯಾವ ಒತ್ತಡ ಕಾಂಗ್ರೆಸ್ ಸರ್ಕಾರವನ್ನು ತಡೆಯುತ್ತಿದೆ? ಕನ್ನಡಿಗರ ಈ ಪ್ರಶ್ನೆಗಳಿಗೆ, ಅನುಮಾನಗಳಿಗೆ ಸಿಎಂ ಹಾಗೂ ಡಿಸಿಎಂ ಅವರು ಉತ್ತರ ನೀಡಬೇಕು ಎಂದಿದ್ದಾರೆ.