ಈ ವರ್ಷದ ತನ್ನ ಮೊದಲ ಉಡಾವಣೆಯನ್ನು ಫೆಬ್ರವರಿ 14ರಂದು ಮಾಡಲಿರುವ ಇಸ್ರೋ, ಪಿಎಸ್‌ಎಲ್‌ವಿ-ಸಿಇ52 ಗಗನನೌಕೆಯ ಮೂಲಕ ರಿಸ್ಯಾಟ್-1ಎ ಉಪಗ್ರಹವನ್ನು ಸೂರ್ಯಪಥದ ಕಕ್ಷೆಗೆ ಸೇರಿಸಲಿದೆ.
ಸೋಮವಾರ ಬೆಳಗ್ಗಿನ ಜಾವ 5:59ಕ್ಕೆ ಈ ಉಡಾವಣೆ ನಿಗದಿಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, 1,710 ಕೆಜಿ ತೂಕದ ಭೂವೀಕ್ಷಣಾ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ52 ತನ್ನ ಮಡಿಲಲ್ಲಿ ಹೊತ್ತುಕೊಂಡು, ಭೂಮೇಲ್ಮೈನಿಂದ 529ಕಿಮೀ ಎತ್ತರದಲ್ಲಿರುವ ಸೂರ್ಯ ಪಥದ ಕಕ್ಷೆಗೆ ಸೇರಿಸಬೇಕಿದೆ.
ಇಓಎಸ್-04 ಅಥವಾ ರಿಸ್ಯಾಟ್-1ಎ ಹಸರಿನ ಈ ಉಪಗ್ರಹವು ರೇಡಾರ್ ಇಮೇಜಿಂಗ್ ಕ್ಷಮತೆ ಹೊಂದಿದ್ದು, ಸರ್ವಋತುವಿನಲ್ಲೂ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನಲ್ಲಿರುವ ತೇವಾಂಶ ಹಾಗೂ ಜಲವಿಜ್ಞಾನದ ಕೆಲಸಗಳಿಗೆ ಭಾರೀ ಸಹಾಯ ಮಾಡಲಿದೆ.
ಇದೇ ಮಿಷನ್‌ನಲ್ಲಿ ಇನ್ನೆರಡು ಪುಟ್ಟ ಉಪಗ್ರಹಗಳನ್ನು ಹೊತ್ತೊಯ್ಯಲಾಗುವುದು. ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಐಐಎಸ್‌ಟಿ) ಮತ್ತು ಕೊಲರಾಡೋದ ವಾತಾವರಣ ಹಾಗೂ ಬಾಹ್ಯಾಕಾಶ ಭೌತಶಾಸ್ತ್ರ ವಿವಿ ವಿದ್ಯಾರ್ಥಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಇನ್ಸ್ಪೈರ್‌ಸ್ಯಾಟ್-1 ಮತ್ತು ಭಾರತ-ಭೂತಾನ್ ಜಂಟಿ ಉಪಗ್ರಹ ಐಎನ್‌ಎಸ್-2ಟಿಡಿಯನ್ನು ಸಹ ಈ ಉಡಾವಣೆ ವೇಳೆ ಹೊತ್ತೊಯ್ಯಲಾಗುವುದು.
ಭಾರೀ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಚಂದ್ರಯಾನ-3 ಮತ್ತು ಆದಿತ್ಯಾ-ಎಲ್1 ಗಳ ಹಿನ್ನೆಲೆಯಲ್ಲಿ ಸೋಮವಾರದ ಈ ಉಡಾವಣೆ ಇಸ್ರೋನ ಆತ್ಮವಿಶ್ವಾಸ ವೃದ್ಧಿಸಲು ಭಾರೀ ಅನುಕೂಲವಾಗಲಿದೆ.