ಯಾದಗಿರಿ: ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಡೀ ವಿಶ್ವವೇ ಇಸ್ರೋ ವಿಜ್ಞಾನಿಗಳ ಸಾಧನೆಗೆ ಬೆರಗಾಗಿದೆ. ಈ ಯಶಸ್ಸಿಗೆ ಇಸ್ರೋ ಸಂಸ್ಥೆಗೆ ಮತ್ತು ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಯಾದಗಿರಿ ಜಿಲ್ಲೆ ವಡಗೇರಾದ ಕುಟುಂಬವೊಂದು ಮಕ್ಕಳಿಗೆ ವಿಕ್ರಮ್ ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟಿದೆ. ಈ ಮೂಲಕ ದೇಶಕ್ಕೆ ಹಾಗೂ ಇಸ್ರೋ ಸಂಸ್ಥೆ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಿಂಗಮ್ಮ ನಾಟೆಕಾರ್ ಕುಟುಂಬದ ಬಾಲಪ್ಪ ಮತ್ತು ನಾಗಮ್ಮ ದಂಪತಿಗೆ ಜನಿಸಿದ ಗಂಡು ಮಗುವಿಗೆ ವಿಕ್ರಮ್, ನಿಂಗಪ್ಪ ಮತ್ತು ಶಿವಮ್ಮ ದಂಪತಿಗೆ ಜನಿಸಿದ ಹೆಣ್ಣು ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡುವ ಮೂಲಕ ಕುಟುಂಬದವರು ದೇಶಾಭಿಮಾನ ಮೆರೆದಿದ್ದಾರೆ.
ಜುಲೈ 28ರಂದು ವಿಕ್ರಮ್ ಜನಿಸಿದ್ದು, ಆಗಸ್ಟ್ 18ರಂದು ಪ್ರಗ್ಯಾನ್ ಜನಿಸಿದ್ದಾಳೆ. ಆಗಸ್ಟ್ 23 ರಂದು ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಆಗಸ್ಟ್ 24ರಂದು ನಾಮಕರಣ ಸಮಾರಂಭ ಮಾಡಲಾಗಿದ್ದು, ವಿಕ್ರಮ್ ಮತ್ತು ಪ್ರಗ್ಯಾನ್ ಎಂದು ಹೆಸರಿಡುವ ಮೂಲಕ ಕುಟುಂಬದವರು ದೇಶಾಭಿಮಾನ ತೋರಿದ್ದಾರೆ. ಈ ಮೂಲಕ ಚಂದ್ರಯಾನ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ.