ಭಾರತವು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿದ್ದಂತೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಹೆಸರನ್ನು ಪ್ರಕಟಿಸಲಾಯಿತು. ಇಂಡಿಗೋದ ಗಗನಸಖಿ ಪೂಜಾ ಶಾ ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಇಂದು ನಮ್ಮ ವಿಮಾನವನ್ನು ಹತ್ತಿದ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರ ಉಪಸ್ಥಿತಿಯನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಪೂಜಾ ಶಾ ಹೇಳಿದ್ರು. ಸೋಮನಾಥ್ ಮತ್ತು ಅವರ ತಂಡಕ್ಕೆ ಬಿಗ್ ಸೆಲ್ಯೂಟ್. ನೀವು ಬೋರ್ಡಿನಲ್ಲಿದ್ದಕ್ಕೆ ನಮಗೆ ಹೆಮ್ಮೆ ಇದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಆಕೆ ಘೋಷಣೆ ಮಾಡುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟಿದ್ರು. ಮತ್ತೊಬ್ಬ ಗಗನಸಖಿ ಇಸ್ರೋ ಮುಖ್ಯಸ್ಥರಿಗೆ ತಿಂಡಿ ತಿನಿಸುಗಳ ಟ್ರೇ ತಂದು ಸತ್ಕರಿಸಿದ್ರು. ಅಲ್ಲದೆ ಸೋಮನಾಥ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಇಂಡಿಗೋ ಪೈಲಟ್ ಒಬ್ಬರು ಚಂದ್ರನ ಮೇಲೆ ಇಳಿಯುವ ಇಸ್ರೋದ ಐತಿಹಾಸಿಕ ಸಾಧನೆಯ ಕುರಿತು ವಿಮಾನದಲ್ಲಿ ಘೋಷಣೆ ಮಾಡಿದ ವಿಡಿಯೋ ವೈರಲ್ ಆಗಿತ್ತು.