ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕಾನ್ಸರ್ ನಿಂದ ಬಳಲುತ್ತಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಈ ಬಗ್ಗೆ ಸ್ವತಃ ಇಸ್ರೋ ಅಧ್ಯಕ್ಷ ಸೋಮನಾಥ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಕ್ಯಾನ್ಸರ್ ದೃಢಪಟ್ಟ ದಿನ ಹಾಗೂ ಪ್ರಸ್ತುತ ಆರೋಗ್ಯ ಸ್ಥಿತಿ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆ ದಿನದಂದೇ ಕ್ಯಾನ್ಸರ್ ಇರುವ ಬಗ್ಗೆ ಗೊತ್ತಾಯಿತು. ಒಂದೆಡೆ ಆದಿತ್ಯ ಎಲ್-1 ಉಡಾವಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಎಂದು ತಿಳಿದುಬಂದಿದೆ.
ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಇದ್ದವು. ಆದರೆ ಯಾವುದೇ ಸ್ಪಷ್ಟನೆ ಇರಲಿಲ್ಲ. ಆದಿತ್ಯ ಎಲ್-1 ಉಡಾವಣೆ ದಿನದಂದು ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಅಂದು ಸ್ಕ್ಯಾನಿಂಗ್ ಮಾಡಿದಾಗ ವಿಷಯ ತಿಳಿಯಿತು. ಇದರಿಂದ ಕುಟುಂಬದವರು, ವಿಜ್ಞಾನಿಗಳು ತೀವ್ರ ಬೇಸರಗೊಂಡರು.
ಚೆನ್ನೈಗೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದು ಸುದೀರ್ಘ ಪ್ರಕ್ರಿಯೆ. ನಾನು ಈ ಯುದ್ಧದಲ್ಲಿ ಹೋರಾಡುತ್ತೇನೆ. ನಾಲ್ಕು ದಿನ ಮಾತ್ರ ನಾನು ಆಸ್ಪತ್ರೆಯಲ್ಲಿ ಇದ್ದೆ. ಸದ್ಯ ಯಾವುದೆ ನೋವಿಲ್ಲದೇ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.