ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಸಂಘರ್ಷದ ನಡುವೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಭಾಷಣದ ತುಣುಕೊಂದು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ವೈರಲ್ ವಿಡಿಯೋದಲ್ಲಿ ವಾಜಪೇಯಿ ಇಸ್ರೇಲ್ ಮತ್ತು ಪಾಲೆಸ್ತೀನ್ ನಡುವಿನ ಸಂಘರ್ಷದ ವಿಚಾರದಲ್ಲಿ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದ್ದಾರೆ.
ಇಸ್ರೇಲ್ ಮತ್ತು ಗಾಜಾದ ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಈ ವೀಡಿಯೊ ಮರುಕಳಿಸಿದೆ. 1977 ರಲ್ಲಿ ಮಾಡಿದ ಭಾಷಣದ ವಿಡಿಯೋದಲ್ಲಿ ವಾಜಪೇಯಿ “ಜನತಾ ಪಕ್ಷವು ಸರ್ಕಾರವನ್ನು ರಚಿಸಿದೆ ಎಂದು ಹೇಳಲಾಗುತ್ತಿದೆ, ಅದು ಅರಬ್ಬರನ್ನು ಬೆಂಬಲಿಸುವುದಿಲ್ಲ, ಅದು ಇಸ್ರೇಲ್ ಅನ್ನು ಬೆಂಬಲಿಸುತ್ತದೆ. ಪರಿಸ್ಥಿತಿಯನ್ನು ಮಾನ್ಯ ಮೊರಾರ್ಜಿ ಭಾಯ್ ಅವರು ಸ್ಪಷ್ಟಪಡಿಸಿದ್ದಾರೆ. ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ನಾನು ಹೇಳಲು ಬಯಸುತ್ತೇನೆ. ನಾವು ಪ್ರತಿ ಪ್ರಶ್ನೆಯನ್ನು ಅರ್ಹತೆ ಮತ್ತು ದೋಷಗಳ ಆಧಾರದ ಮೇಲೆ ನೋಡಬೇಕೆಂದು ಬಯಸುತ್ತೇವೆ ಆದರೆ ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ಆಕ್ರಮಿಸಿಕೊಂಡಿರುವ ಅರಬ್ ಭೂಮಿಯನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ಸ್ಪಷ್ಟವಾಗಿದೆ. ಆಕ್ರಮಣಕಾರರು ಆಕ್ರಮಣದ ಫಲವನ್ನು ಅನುಭವಿಸಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ, ಆದ್ದರಿಂದ ನಮಗೆ ಅನ್ವಯಿಸುವ ನಿಯಮಗಳು ಇತರರಿಗೂ ಅನ್ವಯಿಸುತ್ತವೆ, ಅರಬ್ಬರ ಭೂಮಿಯನ್ನು ಖಾಲಿ ಮಾಡಬೇಕು.” ಎಂದಿದ್ದಾರೆ.
ದಿವಂಗತ ಪ್ರಧಾನಿ ವಾಜಪೇಯಿ ಅವರು ದಶಕಗಳಿಂದ ಹಿಂಸಾಚಾರದಿಂದ ಬಳಲುತ್ತಿರುವ ಭೂಮಿಯಲ್ಲಿ ಶಾಂತಿಗಾಗಿ ಪ್ರತಿಪಾದಿಸಿ ” ಆಕ್ರಮಣವನ್ನು ತೊಡೆದು ಹಾಕುವ ಮತ್ತು ಶಾಶ್ವತ ಶಾಂತಿಯ ಆಧಾರವಾಗುವ ಪರಿಹಾರ ಕ್ರಮವನ್ನು ಮಧ್ಯಪ್ರಾಚ್ಯಕ್ಕೆ ಕಂಡುಹಿಡಿಯಬೇಕು” ಎಂದು ಹೇಳಿದರು
ಸುಮಾರು ನಲವತ್ತಾರು ವರ್ಷಗಳ ಹಿಂದಿನ ಸಭೆಯೊಂದರಲ್ಲಿ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಭಾರತದ ಮಾಜಿ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಸ್ರೇಲ್ ‘ಭೂಮಿಯನ್ನು ಖಾಲಿ ಮಾಡುವಂತೆ’ ಒತ್ತಾಯಿಸಿದ್ದರು.
ಇಸ್ರೇಲ್ ಬೆಂಬಲಿಸಿರುವ ಪ್ರಧಾನಿ ಮೋದಿಯವರ ಸಿದ್ದಾಂತಗಳ ನಡುವೆ ಅವರದ್ದೇ ಪಕ್ಷದ ವಾಜಪೇಯಿಯವರ ಮಾತುಗಳು ಇದೀಗ ವಿಭಜಿತ ಸಿದ್ದಾಂತಗಳ ಚರ್ಚೆ ಹುಟ್ಟುಹಾಕಿದೆ. ಸದ್ಯ ಇಸ್ರೇಲ್ ನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಪ್ರಧಾನಿ ಮೋದಿ ಇಸ್ರೇಲ್ ಜೊತೆ ಭಾರತದ ಜನರಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಬೆಂಬಲಿಸಿದ್ದರು.