
ರಮಲ್ಲಾ(ವೆಸ್ಟ್ ಬ್ಯಾಂಕ್): ಹಮಾಸ್ ಸೆರೆಯಿಂದ ಬಿಡುಗಡೆಯಾದ ಮೂವರು ಇಸ್ರೇಲಿ ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ ಸೋಮವಾರ 90 ಪ್ಯಾಲೆಸ್ಟೀನಿಯನ್ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಿದೆ.
ಆಕ್ರಮಿತ ವೆಸ್ ಬ್ಯಾಂಕ್ ನಲ್ಲಿರುವ ಓಫರ್ ಜೈಲಿನಿಂದ ಬಿಡುಗಡೆಯಾದ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಗಳಿಗೆ ಬೃಹತ್ ಜನಸಮೂಹವು ಹರ್ಷೋದ್ಗಾರ ಮತ್ತು ಧ್ವಜಗಳನ್ನು ಬೀಸುತ್ತಾ ಸ್ವಾಗತಿಸಿದೆ. ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಕೈದಿಗಳ ವ್ಯವಹಾರಗಳ ಆಯೋಗವು ಒದಗಿಸಿದ ಪಟ್ಟಿಯ ಪ್ರಕಾರ, ಬಿಡುಗಡೆಯಾದವರೆಲ್ಲರೂ ಮಹಿಳೆಯರು ಅಥವಾ ಅಪ್ರಾಪ್ತ ವಯಸ್ಕರಾಗಿದ್ದಾರೆ.
ಗಾಜಾ ಕದನ ವಿರಾಮ ಜಾರಿಗೆ
ಗಾಜಾ ಪಟ್ಟಿಯನ್ನು ಧ್ವಂಸಗೊಳಿಸಿದ ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟು ಮಾಡಿದ್ದ 15 ತಿಂಗಳ ಯುದ್ಧವನ್ನು ಸ್ಥಗಿತಗೊಳಿಸಲು ಗಾಜಾ ಕದನ ವಿರಾಮ ಅಂತಿಮವಾಗಿ ಜಾರಿಗೆ ಬರುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಜಾ ಕದನ ವಿರಾಮ ಒಪ್ಪಂದದ ಮೊದಲ ಹಂತವು ಮುಂದಿನ ಆರು ವಾರಗಳಲ್ಲಿ ಹಮಾಸ್ ಪ್ಯಾಲೆಸ್ಟೀನಿಯನ್ ಎನ್ಕ್ಲೇವ್‌ನಲ್ಲಿ ಬಂಧಿಸಲ್ಪಟ್ಟ 33 ಇಸ್ರೇಲಿ ಒತ್ತೆಯಾಳುಗಳನ್ನು ಕ್ರಮೇಣ ಬಿಡುಗಡೆ ಮಾಡುವುದನ್ನು ಒಳಗೊಂಡಿರುತ್ತದೆ, ಇದಕ್ಕೆ ಬದಲಾಗಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾದಿಂದ ಸುಮಾರು 2,000 ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಇಂದು ಬಿಡುಗಡೆಯಾದ 90 ಬಂಧಿತರಲ್ಲಿ 69 ಮಹಿಳೆಯರು, 9 ಅಪ್ರಾಪ್ತರು ಸೇರಿದ್ದಾರೆ.