ಇಸ್ರೇಲ್ ಮತ್ತು ಪಾಲೆಸ್ತೀನ್ ನ ಹಮಾಸ್ ಉಗ್ರರ ನಡುವಿನ ಸಂಘರ್ಷದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ತಿದ್ದು ಆ ನೋವು ಚಿತ್ರರಂಗದ ಗಣ್ಯರ ಕುಟುಂಬವನ್ನೂ ಕಾಡುತ್ತಿದೆ. ಹಮ್ ನೆ ಲಿ ಹೈ-ಶಪತ್ ಮತ್ತು ತುಮ್ಹಾರಿ ಪಾಖಿಯಂತಹ ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದ ಕಿರುತೆರೆ ನಟಿ ಮಧುರಾ ನಾಯಕ್ ಅವರ ಸೋದರಿ, ಆಕೆಯ ಪತಿ ಮತ್ತು ಅವರ ಇಬ್ಬರು ಮಕ್ಕಳು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಹತರಾಗಿದ್ದಾರೆ. ತಮ್ಮ ಸೋದರಿ ಸಂಬಂಧಿ, ಆಕೆಯ ಪತಿ ಮತ್ತು ಮತ್ತು ಮಕ್ಕಳನ್ನು ಪ್ಯಾಲೆಸ್ತೀನ್ ಭಯೋತ್ಪಾದಕರು ಕ್ರೂರವಾಗಿ ಕೊಂದಿದ್ದಾರೆ ಎಂದು ಮಧುರಾ ಇತ್ತೀಚಿನ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ನೋವು ತೋಡಿಕೊಂಡಿದ್ದಾರೆ.
ತಮ್ಮ ಸೋದರಿ ಒಡೆಯಾಳ ಕ್ರೂರ ಸಾವಿನ ನೋವನ್ನು ಹಂಚಿಕೊಂಡಿರುವ ಮಧುರಾ, “ನನ್ನ ಸಹೋದರಿ ಒಡೆಯಾ ಮತ್ತು ಅವಳ ಪತಿಯನ್ನು ಪ್ಯಾಲೆಸ್ತೀನ್ ಭಯೋತ್ಪಾದಕರು ಅವರ ಮಕ್ಕಳ ಮುಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಂದು (ಭಾನುವಾರ) ಅವರೆಲ್ಲಾ ಶವವಾಗಿ ಪತ್ತೆಯಾಗಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ನಮ್ಮ ಪ್ರೀತಿಯ ಸೋದರ ಸಂಬಂಧಿಯ ದುರಂತದ ಸಾವಿನಿಂದ ತೀವ್ರ ದುಃಖವಾಗಿದೆ. ಅವಳ ದಯೆ ಮತ್ತು ಪ್ರೀತಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳೊಂದಿಗೆ ಮತ್ತು ಎಲ್ಲಾ ಸಂತ್ರಸ್ತರೊಂದಿಗೆ ಇವೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮ್ಮೊಂದಿಗೆ ಮತ್ತು ಇಸ್ರೇಲ್ ಜನರೊಂದಿಗೆ ನಿಂತುಕೊಳ್ಳಿ. ಈ ಭಯೋತ್ಪಾದಕರ ನೈಜತೆಯನ್ನು ಮತ್ತು ಅವರು ಎಷ್ಟು ಅಮಾನವೀಯರಾಗಿದ್ದಾರೆಂದು ಜನರು ನೋಡುವ ಸಮಯವಿದು” ಎಂದಿದ್ದಾರೆ.
ತಮ್ಮ ಸೋದರಿ ಅತ್ಯಂತ ದಯಾಮಯಿಯಾಗಿದ್ದು ತಮಗೆ ಪ್ರೀತಿಪಾತ್ರಳಾಗಿದ್ದಳು, ಆಕೆಯ ಗಂಡ ಶ್ರಮಜೀವಿ ಎಂದು ಮಧುರಾ ನಾಯಕ್ ತಮ್ಮ ಕುಟುಂಬ ಸಂಬಂಧಿಗಳ ಸಾವಿನಿಂದ ಅನುಭವಿಸುತ್ತಿರುವ ನೋವು, ದುಃಖವನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ನನ್ನ ಕುಟುಂಬ ಇಂದು ಅನುಭವಿಸುತ್ತಿರುವ ದುಃಖ ಮತ್ತು ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇಸ್ರೇಲ್ ಈಗ ತುಂಬಾ ನೋವಿನಲ್ಲಿದೆ. ಅಲ್ಲಿನ ಮಕ್ಕಳು, ಮಹಿಳೆಯರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇದುವರೆಗೂ ಇಸ್ರೇಲ್ ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.