ಗಾಝಾ : ಇಸ್ರೇಲ್, ಹಮಾಸ್ ನಡುವೆ ಯುದ್ಧ ಮುಂದುವರೆದಿದ್ದು, ಇಸ್ರೇಲ್ ಸೇನೆ ಪೂರ್ವ ರಫಾ ಮೇಲೆ ಶೆಲ್ ದಾಳಿ ನಡೆಸಿದ್ದಾವೆ, ಈ ದಾಳಿಯಲ್ಲಿ ಕಳೆದ 24 ಗಂಟೆಗಳಲ್ಲಿ 133 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಶಾಶ್ವತ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗಾಗಿ ಮೂರು ಹಂತದ ಚೌಕಟ್ಟನ್ನು ರೂಪಿಸಲು ಯುಎಸ್, ಈಜಿಪ್ಟ್, ಇಸ್ರೇಲ್ ಮತ್ತು ಕತಾರ್ನ ಹಿರಿಯ ಅಧಿಕಾರಿಗಳು ಮಂಗಳವಾರ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮಾತುಕತೆ ಪ್ರಾರಂಭಿಸಿದರು. ಇಸ್ರೇಲಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬರ್ನಿ ಕೂಡ ಮಾತುಕತೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಸಂಭಾಷಣೆಯ ಯಾವುದೇ ಅಂಶದ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಮತ್ತು ಮಧ್ಯ ಗಾಝಾದಲ್ಲಿ ನಡೆದ ಹೋರಾಟದಲ್ಲಿ ರಫಾಗೆ ಹೊಂದಿಕೊಂಡಿರುವ ಖಾನ್ ಯೂನಿಸ್ ಪಟ್ಟಣದಲ್ಲಿ 30 ಮಂದಿ ಸೇರಿದಂತೆ ಡಜನ್ಗಟ್ಟಲೆ ಫೆಲೆಸ್ತೀನ್ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮಂಗಳವಾರ ಹೇಳಿಕೊಂಡಿದೆ. ಮಧ್ಯ ಗಾಝಾದ ನುಸ್ರತ್ ನಿರಾಶ್ರಿತರ ಶಿಬಿರದ ಮೇಲೆ ಸೋಮವಾರ ರಾತ್ರಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 16 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಝಾ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 7 ರಿಂದ ಇಸ್ರೇಲ್ ದಾಳಿಯಲ್ಲಿ 28,473 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.