ಕೊರೊನಾ ವೈರಸ್ ಒಮಿಕ್ರಾನ್ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಸ್ರೇಲ್‌ನ ಆರೋಗ್ಯ ಸಚಿವರು ಫಿಜರ್ ಲಸಿಕೆ ಎರಡನೇ ಡೋಸ್ ತೆಗೆದುಕೊಂಡವರು ಅಥವಾ ಕಳೆದ 6 ತಿಂಗಳೊಳಗೆ ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಒಮಿಕ್ರಾನ್ ಅಪಾಯ ಕಡಿಮೆ ಎಂದಿದ್ದಾರೆ. ಆದ್ರೆ ಆರೋಗ್ಯ ಸಚಿವರು, ಈ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ.
ಇಸ್ರೇಲಿ ಆರೋಗ್ಯ ಸಚಿವ ನಿಟ್ಜನ್ ಹೊರೊವಿಟ್ಜ್ ಒಮಿಕ್ರಾನ್ ರೂಪಾಂತರದ ಬಗ್ಗೆ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದ್ದಾರೆ. ಆರೋಗ್ಯ ಸಚಿವರ ಈ ಹೇಳಿಕೆಯ ಕೆಲವು ಗಂಟೆಗಳ ನಂತರ, ಇಸ್ರೇಲಿ ಸುದ್ದಿ ವಾಹಿನಿಯೊಂದು ಫಿಜರ್‌ನ ಲಸಿಕೆಯು ಒಮಿಕ್ರಾನ್ ರೂಪಾಂತರದ ಸೋಂಕನ್ನು ತಡೆಗಟ್ಟುವಲ್ಲಿ ಶೇಕಡಾ 90ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ಮಾಡಿದೆ. ಒಮಿಕ್ರಾನ್, ಡೆಲ್ಟಾ ರೂಪಾಂತರಕ್ಕಿಂತ ಕೇವಲ 1.3 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಚಾನೆಲ್ ವರದಿ ಮಾಡಿದೆ.
ಇಸ್ರೇಲ್‌ನಲ್ಲಿ ಒಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಒಮಿಕ್ರಾನ್ ಅಪಾಯದಿಂದ ತಪ್ಪಿಸಿಕೊಳ್ಳಲು, ಇಸ್ರೇಲ್, ಗಡಿ ಮಾರ್ಗವನ್ನು ಭಾನುವಾರವೇ ಮುಚ್ಚಿದೆ.
ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಕಾರಣ, ಪ್ರಪಂಚದ ಅನೇಕ ದೇಶಗಳು, ಒಮಿಕ್ರಾನ್ ವರದಿಯಾದ ದೇಶಗಳ ಮೇಲೆ ನಿರ್ಬಂದ ಹೇರಿವೆ. ಈ ನಿರ್ಬಂಧವನ್ನು ವಿಶ್ವ ಆರೋಗ್ಯ ಸಂಸ್ಥೆ ವಿರೋಧಿಸಿದೆ. ಇದು ಸಂಪೂರ್ಣ ತಪ್ಪು ವಿಧಾನ. ಭವಿಷ್ಯದಲ್ಲಿ ಈ ದೇಶಗಳು ಸ್ಪಷ್ಟ ಹಾಗೂ ಪಾರದರ್ಶಕ ಮಾಹಿತಿ ನೀಡದಿರಬಹುದು ಎಂದು ಡಬ್ಲ್ಯುಎಚ್ ಒ ಹೇಳಿದೆ.