ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಮನೆಯಲ್ಲಿಯೇ ಐಸೋಲೇಟ್ ಆಗುವ ಪ್ರಮಾಣದಲ್ಲಿ ಮಾತ್ರ ಸೋಂಕು ಸಂಭವಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್, ಗ್ರಾಮೀಣ ಭಾಗದಲ್ಲಿ 18 ವರ್ಷ ಕೆಳಗಿನವರಲ್ಲಿ 63 ಪ್ರತಿಶತ ಹಾಗೂ 18 ವರ್ಷ ಮೇಲ್ಪಟ್ಟವರಲ್ಲಿ 63 ಪ್ರತಿಶತ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಕೊರೊನಾ ಮೂರನೇ ಅಲೆಯಲ್ಲಿ ಸೋಂಕು ಮಕ್ಕಳಿಗೆ ತಗುಲಿದ್ರೂ ಸಹ ಲಕ್ಷಣಗಳು ತುಂಬಾನೇ ಸೌಮ್ಯ ಪ್ರಮಾಣದಲ್ಲಿ ಇರಲಿದೆ. ಮನೆಯಲ್ಲಿಯೇ ಐಸೋಲೇಷನ್ ಆಗುವಷ್ಟರ ಮಟ್ಟಿಗೆ ಮಾತ್ರ ಸೋಂಕು ತಗುಲಲಿದೆ ಎಂದು ಪಾಲ್ ಹೇಳಿದ್ದಾರೆ.
ಅಲ್ಲದೇ ಕೊರೊನಾ ಮೂರನೇ ಅಲೆ ಆರಂಭಕ್ಕೂ ಮುನ್ನ ದೇಶದಲ್ಲಿ ಬಹುತೇಕ ಮಂದಿ ಕೊರೊನಾ ಲಸಿಕೆಯನ್ನ ಪಡೆದಿರ್ತಾರೆ. ಕೊರೊನಾ ಲಸಿಕೆಯು ದೇಶದಲ್ಲಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನ 75-80 ಪ್ರತಿಶತ ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆಯನ್ನ ಪಡೆದಿರುವ ವ್ಯಕ್ತಿ ಸೋಂಕಿಗೆ ಒಳಗಾದಲ್ಲಿ ಆತ ವೈದ್ಯಕೀಯ ಆಮ್ಲಜನಕ ಪಡೆಯುವ ಪ್ರಮಾಣ ಕೇವಲ 8 ಪ್ರತಿಶತ ಹಾಗೂ ಐಸಿಯುಗೆ ದಾಖಲಾಗುವ ಪ್ರಮಾಣ ಕೇವಲ 6 ಪ್ರತಿಶತ ಮಾತ್ರ ಎಂದು ಪಾಲ್ ಹೇಳಿದ್ದಾರೆ.