ಶಿವಮೊಗ್ಗ: ದ್ವಿಚಕ್ರ ವಾಹನ ಸವಾರರು ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಬೇಕು ಎಂದು ಈ ಹಿಂದೆಯೇ ಸಂಚಾರಿ ವಿಭಾಗದ ಪೊಲೀಸರು ಹಲವು ಬಾರಿ ಸೂಚನೆ ನೀಡಿದ್ದರೂ ಈ ಬಗ್ಗೆ ವಾಹನ ಸವಾರರ ನಿರ್ಲಕ್ಷ ಮಾತ್ರ ಮುಂದುವರೆದಿದೆ. ಈ ನಡುವೆ ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆಯೇ ಪೊಲೀಸರು ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಡೆದಿದೆ.
ಹಾಫ್ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದ ಬೈಕ್ ಸವಾರರ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಈ ಬಗ್ಗೆ ಬೈಕ್ ಸವಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೆಲ್ಮೆಟ್ ಅಂಗಡಿಗಳ ಬಗ್ಗೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿ ಸಂಚಾರ ವಿಭಾಗ ಪೊಲೀಸರು, ಹಾಫ್ ಹೆಲ್ಮೆಟ್ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಐಎಸ್ಐ ಗುರುತು ಇಲ್ಲದ 741 ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರದಲ್ಲಿ ಐಎಸ್ಐ ಪ್ರಮಾಣಿತವಲ್ಲದ ಒಟ್ಟು 600 ಹಾಫ್ ಹೆಲ್ಮೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ, ಭದ್ರಾವತಿಯಲ್ಲಿ ಒಟ್ಟು 141 ಐಎಸ್ಐ ಪ್ರಮಾಣಿತವಲ್ಲದ ಹಾಫ್ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇನ್ಮುಂದೆ ಐಎಸ್ಐ ಮಾರ್ಕ್ ಇಲ್ಲದ ಹಾಫ್ ಹೆಲ್ಮೆಟ್ ದಾಸ್ತಾನು ಹಾಗೂ ಮಾರಾಟ ಮಾಡದಂತೆ ಬುದ್ಧಿ ಹೇಳಿ, ತಿಳುವಳಿಕೆ ಪತ್ರವನ್ನು ನೀಡಿದ್ದಾರೆ.