ತಲೆ ಕೂದಲು ಉದುರುವುದು ಎನ್ನುವುದು ಈಗ ಎಲ್ಲರನ್ನೂ ಕಾಡುವ ಒಂದು ದೊಡ್ಡ ಸಮಸ್ಯೆಯಾಗಿದೆ. ವಿಟಮಿನ್, ಪ್ರೋಟಿನ್ ಇಲ್ಲದ ಆಹಾರ ಸೇವಿಸುವುದು, ಸರಿಯಾಗಿ ನಿದ್ದೆ ಮಾಡದಿರುವುದು, ಅತಿಯಾದ ಕೆಮಿಕಲ್ ಯುಕ್ತ ಶ್ಯಾಂಪೂಗಳ ಬಳಕೆಯಿಂದ ಈ ಕೂದಲು ಉದುರುವಿಕೆಯ ಸಮಸ್ಯೆ ಕಂಡು ಬರುತ್ತದೆ.
ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳ ಬಳಕೆಯಿಂದ ಇದನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬಹುದು.
ಮನೆಯಲ್ಲಿ ಅಲೋವೇರಾ ಗಿಡವಿದ್ದರೆ ಅದರ ಒಂದು ತುಂಡು ತೆಗೆದುಕೊಂಡು ಎರಡು ಭಾಗವಾಗಿ ಸೀಳಿಕೊಳ್ಳಿ. ನಂತರ ಅದರ ಲೋಳೆಯನ್ನು ತೆಗೆದುಕೊಂಡು ಚೆನ್ನಾಗಿ ನಿಮ್ಮ ತಲೆಗೆ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟಾದ ನಂತರ ತಲೆ ತೊಳೆದುಕೊಳ್ಳಿ. ಇದರಿಂದ ಕೂದಲು ಹೊಳೆಯುವುದರ ಜತೆಗೆ ಕೂದಲು ಉದುರುವಿಕೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
ಮೆಂತೆಕಾಳು. ಹಿಂದಿನಿಂದಲೂ ತಲೆಕೂದಲಿಗೆ ಇದರ ಪೇಸ್ಟ್ ಹಚ್ಚಿಕೊಳ್ಳುವ ಪದ್ಧತಿ ನಡೆದು ಬಂದಿದೆ. ಇದನ್ನು ನೆನೆಸಿಟ್ಟು ರುಬ್ಬಿಕೂಡ ತಲೆಗೆ ಹಚ್ಚಿಕೊಳ್ಳಬಹುದು. ಇದು ರಗಳೆ ಆಗುತ್ತದೆ ಎನ್ನುವವರು ಅರ್ಧ ಕಪ್ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ 1 ಟೀ ಸ್ಪೂನ್ ಮೆಂತೆಕಾಳನ್ನು ಸೇರಿಸಿ. 10 ನಿಮಿಷ ಚೆನ್ನಾಗಿ ಇದನ್ನು ಕುದಿಸಿಕೊಳ್ಳಿ. ನಂತರ ಇದು ತಣ್ಣಾಗುವುದಕ್ಕೆ ಬಿಟ್ಟು ಬಿಡಿ. ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು 20 ನಿಮಿಷ ಹಾಗೇ ಬಿಡಿ. ಸೀಗೆಕಾಯಿ ಪುಡಿಯಿಂದ ತಲೆಯನ್ನು ತೊಳೆದುಕೊಳ್ಳಿ.
ಇನ್ನು ಎರಡು ಈರುಳ್ಳಿ ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣಕ್ಕೆ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನಂತರ ಒಂದು ಹತ್ತಿಯ ಉಂಡೆಯ ಸಹಾಯದಿಂದ ಕೂದಲಿನ ಬುಡಕ್ಕೆ ಈ ಮಿಶ್ರಣ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತಲೆ ತೊಳೆಯಿರಿ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.