ಬೆವರುವುದು ಒಂದು ಸಾಮಾನ್ಯ ಕ್ರಿಯೆ. ಬೆವರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜಾಸ್ತಿ ಬೆವರಿದಷ್ಟೂ ದೇಹದ ಕಲ್ಮಶ ಹೊರ ಹೋಗುತ್ತದೆ. ಚರ್ಮದ ಚಿಕ್ಕ ಚಿಕ್ಕ ರಂಧ್ರದ ಮೂಲಕ ದೇಹದಲ್ಲಿನ ಯೂರಿಯಾ, ಸಕ್ಕರೆ, ಉಪ್ಪು, ಅಮೋನಿಯಾ ಅಂಶಗಳು ಹೊರ ಹಾಕಲ್ಪಡುತ್ತವೆ.
ಹಾಗಿದ್ರೆ ಬೆವರಿಗೂ ತೂಕ ಕಳೆದುಕೊಳ್ಳುವುದಕ್ಕೂ ಸಂಬಂಧವಿದೆಯಾ…? ಬೆವರು ಹೆಚ್ಚೆಚ್ಚು ಹೋದಂತೆ ಸಣ್ಣ ಆಗುತ್ತೇವಾ? ಅದಕ್ಕೆ ಇಲ್ಲಿದೆ ಉತ್ತರ.
ನಮ್ಮ ದೇಹದಲ್ಲಿ ಸುಮಾರು 2 ರಿಂದ 4 ಮಿಲಿಯನ್ ಬೆವರು ಗ್ರಂಥಿಗಳಿದ್ದು, ಅಂಗೈಯಲ್ಲೇ ಪ್ರತಿ ಚದರ ಇಂಚಿಗೆ 3 ಸಾವಿರ ಬೆವರು ಗ್ರಂಥಿಗಳಿವೆ. ಬೆವರುವುದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ.
ವಯಸ್ಕರು 1 ರಿಂದ ಒಂದೂವರೆ ಪೌಂಡ್ ನಷ್ಟು ಬೆವರುತ್ತಾರೆ. ಅಲ್ಲದೇ ಬೆವರುವುದು ಹವಾಮಾನದ ಮೇಲೂ ಅವಲಂಬಿತವಾಗುತ್ತೆ. ಬೇಸಿಗೆಯಲ್ಲಿ ಬೆವರಿದಷ್ಟು ಮಳೆಗಾಲ, ಚಳಿಗಾಲದಲ್ಲಿ ಬೆವರುವುದಿಲ್ಲ.
ಬರೀ ಬೆವರುವುದರಿಂದ ತೂಕ ಕಡಿಮೆಯಾಗುತ್ತದೆ ಅನ್ನೋದು ಅತೀ ಕಡಿಮೆ ಪ್ರಮಾಣ. ಇದರಿಂದ ದೇಹದಲ್ಲಿನ ನೀರಿನಂಶದ ತೂಕ ಕಡಿಮೆಯಾಗಬಹುದಷ್ಟೇ. ಆದರೆ ನೀವು ದಿನವೂ ವ್ಯಾಯಾಮ ಮಾಡಿದರೆ ದೇಹದಿಂದ ಬೆವರಿಳಿಯುತ್ತೆ ಜೊತೆಗೆ ತೂಕ ಖಂಡಿತಾ ಕಡಿಮೆಯಾಗುತ್ತೆ.