ತಮ್ಮ ಕಾನ್ವಾಯ್ ನಿಂದ, ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಗುಮೋತಗಾಂವ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡು, ನಾಗಾಂವ್ ನ ಉಪ ಆಯುಕ್ತರಿಗೆ ಸಾರ್ವಜನಿಕರ ಸಮ್ಮುಖದಲ್ಲೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶರ್ಮಾ ಅವರು ಭಾನುವಾರದಂದು ರಸ್ತೆ ಯೋಜನೆಗೆ ಶಂಕುಸ್ಥಾಪನೆ ಮಾಡಲು ನಾಗಾಂವ್ ಗೆ ಆಗಮಿಸಿದ್ದರು. ನಂತರ ನಾಗಾಂವ್‌ನ ಮಹಾ ಮೃತ್ಯುಂಜಯ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದರು.
ವೈರಲ್ ಆಗಿರುವ ವಿಡಿಯೊ ಕ್ಲಿಪ್‌ನಲ್ಲಿ, ವಾಹನಗಳನ್ನು ಏಕೆ ನಿಲ್ಲಿಸಲಾಗಿದೆ, ಯಾರಾದರು “ರಾಜ-ಮಹಾರಾಜರು” ಹಾದುಹೋಗುತ್ತಿದ್ದಾರೆಯೇ ಎಂದು ಶರ್ಮಾ ಅವರು ಡಿಸಿಯನ್ನು ಪ್ರಶ್ನಿಸುತ್ತಿದ್ದಾರೆ. ಇದು ಅವರ ಬೆಂಗಾವಲು ಪಡೆ ಸಾಗಲು ಎಂದು ಡಿಸಿ ಹೇಳಿದಾಗ, ಸಿಟ್ಟಾದ ಶರ್ಮಾ, ಕೋಪದ ಸ್ವರದಲ್ಲಿ, ಇದನ್ನು ಮತ್ತೆ ಮಾಡಬೇಡಿ ಎಂದಿದ್ದಾರೆ.
ಪ್ರಯಾಣಿಕರಿಂದ ತುಂಬಿದ್ದ ಬಸ್‌ಗಳು, ಇತರೆ ವಾಹನಗಳು ಟ್ರಾಫಿಕ್ ದಟ್ಟಣೆಯಲ್ಲಿ, ಸರತಿ ಸಾಲಿನಲ್ಲಿ ನಿಂತಿದ್ದನ್ನ ನೋಡಿದ ಶರ್ಮಾ ಅವರು, ನಾಗಾಂವ್ ಡಿಸಿ ನಿಸರ್ಗ ಹಿವ್ರೆ ಅವರಿಗೆ ಕರೆ ಮಾಡಿ ವಾಹನಗಳನ್ನು ನಿಲ್ಲಿಸಲು ಕಾರಣವೇನು ಎಂದು ಪ್ರಶ್ನಿಸಿದರು. ನನ್ನ ಭೇಟಿಯ ಸಮಯದಲ್ಲಿ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡದಂತೆ ಸ್ಪಷ್ಟ ನಿರ್ದೇಶನದ ಹೊರತಾಗಿಯೂ, ನನಗಾಗಿ ಸಂಚಾರವನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳನ್ನ ನಾನು ತರಾಟೆಗೆ ತೆಗೆದುಕೊಳ್ಳಲೆಬೇಕಾಯಿತು. ಸುಮಾರು 15 ನಿಮಿಷಗಳ ಕಾಲ ಆಂಬ್ಯುಲೆನ್ಸ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯನ್ನೆ ತಡೆ ಹಿಡಿದಿದ್ದರು. ಇಂದಿನ ಅಸ್ಸಾಂನಲ್ಲಿ ಈ ವಿಐಪಿ ಸಂಸ್ಕೃತಿ ಸ್ವೀಕಾರಾರ್ಹವಲ್ಲ ಎಂದು ಶರ್ಮಾ ಹೇಳಿದ್ದಾರೆ.
ಜನವರಿ 1 ರಂದು, ತಮ್ಮ ಬೆಂಗಾವಲು ಪಡೆ ವಾಹನಗಳನ್ನ ಆರರಿಂದ ಏಳಕ್ಕೆ ಇಳಿಸಲಾಗುವುದು. ಇತರ ಎಲ್ಲಾ ಸಚಿವರು, ಶಾಸಕರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಶರ್ಮಾ ಹೇಳಿದ್ದರು. ಸಚಿವರು, ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಂತಹ ಸಾಂವಿಧಾನಿಕ ಹುದ್ದೆಗಳನ್ನು ಹೊರತುಪಡಿಸಿ ಪಿಎಸ್‌ಒಗಳನ್ನು ಪ್ರಮುಖ ಭದ್ರತಾ ಪರಿಶೀಲನೆಯ ಆಧಾರದ ಮೇಲೆ ನಿಯೋಜಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.