ದೇಶಾದ್ಯಂತ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಕೇರಳದಲ್ಲಿ ಕೊರೊನಾ ಅಲೆ ಬೆನ್ನಲ್ಲೇ ರಾಜ್ಯದಲ್ಲೂ ಅಲರ್ಟ್ ನೀಡಲಾಗಿದೆ. 2020ರ ಬಳಿಕ 2 ವರ್ಷ ಕಾಡಿದ್ದ ಕೊರೊನಾ ಹೋಯ್ತು ಎಂದುಕೊಳ್ಳುವಷ್ಟರಲ್ಲೇ ಮತ್ತೊಮ್ಮೆ ಕಾಡಲು ಮುಂದಾಗಿದೆ. ಸಿಂಗಾಪುರದಲ್ಲಿ ಕಳೆದೊಂದು ವಾರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಮಟ್ಟದಲ್ಲಿ ಏರಿಕೆಯಾಗಿವೆ. ಕಳೆದೊಂದು ವಾರದಲ್ಲಿ ಶೇಕಡಾ 75 ರಷ್ಟು ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ.
ಆರೋಗ್ಯ ಸಚಿವಾಲಯದ ಪ್ರಕಾರ ಡಿಸೆಂಬರ್ 3 ರಿಂದ 9 ರ ವಾರದಲ್ಲಿ ಕನಿಷ್ಠ 56,043 ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಆರೋಗ್ಯ ಸಚಿವಾಲಯ ಹೆಚ್ಚು ಅಲರ್ಟ್ ಆಗಿದೆ. ಇತ್ತೀಚಿಗೆ ಅನಾರೋಗ್ಯದ ಪರಿಸ್ಥಿತಿ ಸರಿ ಇಲ್ಲದಿದ್ದರೂ ಸಾರ್ವಜನಿಕರು ಎಲ್ಲಾ ಕಡೆ ಮಾಸ್ಕ್ ಧರಿಸಬೇಕೆಂದು ಸೂಚಿಸಲಾಗಿದೆ.
ಒಂದು ವೇಳೆ ಇನ್ನೂ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾದರೆ ಸಿಂಗಾಪುರ್ ಎಕ್ಸ್ ಪೋ ಹಾಲ್ 10 ನಲ್ಲಿ ಕೋವಿಡ್ 19 ಚಿಕಿತ್ಸಾ ಸೌಲಭ್ಯವನ್ನು ತೆರೆಯುವುದಾಗಿ ಘೋಷಿಸಲಾಗಿದೆ. ಈ ವಾರಾಂತ್ಯದಲ್ಲಿ ಸಿಂಗಾಪುರ್ ಎಕ್ಸ್ ಪೋ ನಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದೆಂದು ವರದಿಯಾಗಿದೆ. ಇದಕ್ಕಾಗಿ ತುರ್ತಾಗಿ ಬೇಕಾಗಿರುವ ವೈದ್ಯರು, ವೈದ್ಯಕೀಯ ಸೌಲಭ್ಯಗಳು, ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಲು ಸಿಂಗಾಪುರ ಸಜ್ಜಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ ಪ್ರತಿ ವಾರ 225 ಮಂದಿ ಆಸ್ಪತ್ರೆಗಳಿಗೆ ದಾಖಲಾಗ್ತಿದ್ರು. ಆದ್ರೆ ಈಗ ಪ್ರತಿದಿನ ಸರಾಸರಿ 350ಮಂದಿ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಏತನ್ಮಧ್ಯೆ ಜನರು ವೈರಸ್ ವಿರುದ್ಧ ಬೇಗನೆ ಲಸಿಕೆ ಹಾಕಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಸಿಂಗಾಪುರ ಅಷ್ಟೇ ಅಲ್ಲದೇ ಮಲೇಷಿಯಾದಲ್ಲೂ ಕೋವಿಡ್ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿವೆ. ಡಿಸೆಂಬರ್ 10 ಮತ್ತು 16 ರ ನಡುವೆ ಮಲೇಷ್ಯಾದಲ್ಲಿ 20,696 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಲಾಕ್ ಡೌನ್ ಮಾಡಲಾಗುತ್ತೆಂಬ ವದಂತಿಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವರಾದ ಜುಲ್ಕೆಫ್ಲಿ ಅಹ್ಮದ್ ಅನಗತ್ಯವಾಗಿ ಜನ ಓಡಾಡದಂತೆ ಮನವಿ ಮಾಡಿದ್ದಾರೆ. ಮಾಸ್ಕ್ ಧರಿಸಿ, ನೈರ್ಮಲ್ಯ ಕಾಪಾಡುವಂತೆ ಹಾಗು ಬೂಸ್ಟರ್ ಡೋಸ್ ಪಡೆಯುವಂತೆ ಕೇಳಿಕೊಂಡಿದ್ದಾರೆ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ 2020ರಲ್ಲಿ ಪ್ರಾರಂಭವಾದ ಮಾರಣಾಂತಿಕ ಕರೋನ ವೈರಸ್ ವಿಶ್ವದಾದ್ಯಂತ ಇದುವರೆಗೆ 2 ಮಿಲಿಯನ್ ಗೂ ಹೆಚ್ಚು ಜನರ ಪ್ರಾಣ ತೆಗೆದಿದೆ.