ಲಂಡನ್: ರಿಷಿ ಸುನಕ್ ಅವರು ಇಂಗ್ಲೆಂಡ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅವರ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ.
ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಉನ್ನತ ಸ್ಥಾನ ಏರಿದಾಕ್ಷಣ ಆತ/ಆಕೆ ನಮ್ಮವಳು, ನಮ್ಮ ಊರು, ಜಾತಿ ಎಲ್ಲವೂ ಶುರುವಾಗಿಬಿಡುತ್ತದೆ. ಅದೇ ರೀತಿ ರಿಷಿ ಸುನಕ್ ಅವರಿಗೂ ಆಗಿದ್ದು, ಅವರು ಪಾಕಿಸ್ತಾನದವರು ಎಂದು ಪಾಕಿಸ್ತಾನವೇ ಹೇಳಿಕೊಳ್ಳುತ್ತಿದೆ!
ಆದರೆ ಅಸಲಿಗೆ ಇದೊಂದು ಹಾಸ್ಯಾಸ್ಪದ ವಿಷಯವಾಗಿರುವುದಾಗಿ ಬಹಿರಂಗಗೊಂಡಿದೆ. ರಿಷಿ ಸುನಕ್ ಅವರ ಪೂರ್ವಜರು ಅಖಂಡ ಭಾರತದ (ಈಗ ಪಾಕಿಸ್ತಾನದ ಪಂಜಾಬ್ ಭಾಗವಾಗಿರುವ) ಗುಜ್ರನ್ ವಾಲಾ ಎಂಬಲ್ಲಿ ವಾಸಿಸುತ್ತಿದ್ದರು.
1930ರಲ್ಲಿ ಅಲ್ಲಿ ಮತೀಯ ಗಲಭೆಗಳು ಪ್ರಾರಂಭವಾದವು. ರಾಮದಾಸ್ ಸುನಕ್ ಹಿಂಸೆಯನ್ನು ತಡೆಯಲಾರದೆ ತಮ್ಮ ಆಸ್ತಿ ಪಾಸ್ತಿಗಳನ್ನು ತೊರೆದು ಆಫ್ರಿಕಾದ ಕೀನ್ಯಾ ದೇಶದಲ್ಲಿ ಬ್ರಿಟಿಷ್ ಸರ್ಕಾರದ ಗುಮಾಸ್ತ ನೌಕರಿ ಪಡೆದು 1935ರಲ್ಲಿ ಅಲ್ಲಿಗೆ ವಲಸೆ ಹೋದರು. ತಮ್ಮ ತಾಯಿ ಮತ್ತು ಹೆಂಡತಿಯನ್ನು ಸುರಕ್ಷಿತವಾಗಿ ದೆಹಲಿಗೆ ಕಳುಹಿಸಿದರು. ಇವರಿಬ್ಬರೂ 1937ರಲ್ಲಿ ರಾಮದಾಸರನ್ನು ಕೂಡಿಕೊಳ್ಳಲು ದೆಹಲಿಯಿಂದ ಕೀನ್ಯಾಗೆ ಹೊರಟು ಹೋದರು. ಇತ್ತ 1947ರಲ್ಲಿ ಭಾರತ ವಿಭಜನೆಗೊಂಡಾಗ ಸುನಕ್ ಕುಟುಂಬದ ಗುಜ್ರನ್ ವಾಲಾ ಪಾಕಿಸ್ತಾನದ ಪಾಲಾಯಿತು.
ರಾಮದಾಸ್ ಸುನಕ್ ದಂಪತಿಗೆ ಮೂರು ಜನ ಗಂಡು ಮಕ್ಕಳೂ ಮೂರು ಜನ ಹೆಣ್ಣುಮಕ್ಕಳೂ ಜನಿಸಿದರು. ಅವರಲ್ಲಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ 1949ರಲ್ಲಿ ಹುಟ್ಟಿದ ಯಶ್ ವೀರ್ ಸಹ ಒಬ್ಬರು. ಯಶ್ ವೀರ್ 1966ರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬ್ರಿಟನ್ನಿಗೆ ತೆರಳಿ ಅಲ್ಲಿಯೇ ನೆಲಸಿ 1977ರಲ್ಲಿ ಇನ್ನೊಂದು ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದ ಉಷಾ ಎನ್ನುವವರನ್ನು ವಿವಾಹವಾದರು. 1980ರಲ್ಲಿ ಅವರಿಗೆ ಹುಟ್ಟಿದ ಮಗನೇ ಇಂದು ಆ ದೇಶದ ಪ್ರಧಾನ ಮಂತ್ರಿಯಾಗಿರುವ ರಿಷಿ. ಇದು ನಿಜವಾದ ಮಾಹಿತಿ.
‘ಸುನಕ್ ಕುಟುಂಬವನ್ನು ದೇಶಭ್ರಷ್ಟರನ್ನಾಗಿಸಿ ಅವರ ಮನೆ ಮಠ ಮತ್ತು ಆಸ್ತಿಪಾಸ್ತಿಗಳನ್ನೂ ನುಂಗಿ ನೀರುಕುಡಿದ ಪಾಕಿಸ್ತಾನಿಯರು ನಾಚಿಕೆ ಇಲ್ಲದೆ ಸುನಕ್ ಪಾಕಿಸ್ತಾನಿ ಮೂಲದವರೆಂದು ಹೇಳಿಕೊಳ್ಳಲು ಯತ್ನಿಸುತ್ತಿರುವುದು ಇತಿಹಾಸದ ವ್ಯಂಗ್ಯ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.