ಮುಟ್ಟಿನ ಸಮಯದಲ್ಲಿ ನೋವು ಅಥವಾ ಸ್ನಾಯು ಸೆಳೆತ ಇರುವುದು ಸಾಮಾನ್ಯ. ಇದು ಬಹುತೇಕ ಎಲ್ಲಾ ಮಹಿಳೆಯರು ಮತ್ತು ಹೆಣ್ಣುಮಕ್ಕಳಲ್ಲಿ ಸಂಭವಿಸುತ್ತದೆ. ಆದರೆ ಕೆಲವರು ಮುಟ್ಟಿನ ಸಮಯದಲ್ಲಿ ಸಹಿಸಲಸಾಧ್ಯವಾದಂತಹ ನೋವು ಅನುಭವಿಸುತ್ತಾರೆ. ಈ ನೋವು ಸಾಮಾನ್ಯವೇ ಅಥವಾ ಯಾವುದಾದರೂ ಗಂಭೀರ ಕಾಯಿಲೆಯ ಸಂಕೇತವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ತೀವ್ರವಾದ ನೋವು ಮತ್ತು ದೇಹದ ಸೆಳೆತಗಳಿದ್ದಾಗ ನಿಮ್ಮ ಋತುಚಕ್ರ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಮುಟ್ಟಿನ ಸಮಯದಲ್ಲಿನ ಸೆಳೆತ ಮತ್ತು ಅತಿಯಾದ ನೋವು ಗಂಭೀರ ಅನಾರೋಗ್ಯವನ್ನು ಸೂಚಿಸುತ್ತದೆ. ಋತುಚಕ್ರದ ಸಮಯದಲ್ಲಿ, ಅಂಡಾಶಯದ ಪದರಗಳು ಒಡೆಯುತ್ತವೆ. ಈ ಸಮಯದಲ್ಲಿ ಕೆಲವು ಸಮಸ್ಯೆಗಳಾಗಬಹುದು. ಮುಟ್ಟಿನ ಮೊದಲ ದಿನ ನೋವು ಬರುವುದು ಸಹಜ.
ಆದರೆ ಮೂರ್ನಾಲ್ಕು ದಿನಗಳವರೆಗೂ ನೋವು ಇದ್ದರೆ ಅದು ಸಹಜವಲ್ಲ. ತೀಕ್ಷ್ಣವಾದ ಕುಟುಕುವಿಕೆಯಂತೆ ಭಾಸವಾಗುವ ಯಾವುದೇ ನೋವಿದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು. ಏಕೆಂದರೆ ಈ ಸಮಸ್ಯೆಗಳು ಕಾಲಾನಂತರದಲ್ಲಿ ಹೆಚ್ಚಾಗುತ್ತವೆ.
ಮುಟ್ಟಿನ ನೋವಿಗೆ ಕಾರಣಗಳು
ಮುಟ್ಟಿನ ನೋವನ್ನು ಡಿಸ್ಮೆನೊರಿಯಾ ಎಂದೂ ಕರೆಯುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಮುಟ್ಟಿನ ಮೊದಲು ಮತ್ತು ಋತುಚಕ್ರದ ಸಮಯದಲ್ಲಿ ಇದು ಸಂಭವಿಸುತ್ತದೆ. ಇಂತಹ ನೋವುಗಳು ಹೆಚ್ಚಾಗಿ ಗರ್ಭಾಶಯ ಅಥವಾ ಶ್ರೋಣಿಯ ಅಂಗಗಳಲ್ಲಾಗುತ್ತವೆ. ಎಂಡೊಮೆಟ್ರಿಯೊಸಿಸ್, ಗರ್ಭಾಶಯದ ಫೈಬ್ರಾಯ್ಡ್‌ಗಳು, ಪ್ರೀ ಮೆನ್‌ಸ್ಟ್ರುವಲ್ ಸಿಂಡ್ರೋಮ್ (PMS), ಶ್ರೋಣಿಯ ಉರಿಯೂತದ ಕಾಯಿಲೆ (PID), ಅಡೆನೊಮೈಯೋಸಿಸ್ ಅಥವಾ ಗರ್ಭಕಂಠದ ಸ್ಟೆನೋಸಿಸ್ ಇದ್ದಾಗ ಮುಟ್ಟಿನ ನೋವು ತೀವ್ರವಾಗಿರುತ್ತದೆ.
ಒಳಪದರವನ್ನು ಹೊರಹಾಕಲು ಗರ್ಭಾಶಯದಲ್ಲಿನ ಸ್ನಾಯುಗಳ ಸಂಕೋಚನವನ್ನು ಪ್ರಚೋದಿಸುವ ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ನೋವು ಮತ್ತು ಊತವನ್ನು ಉಂಟುಮಾಡಬಹುದು. ಮುಟ್ಟು ಪ್ರಾರಂಭವಾಗುವ ಮೊದಲು ಅದರ ಮಟ್ಟವು ಹೆಚ್ಚಾಗುತ್ತದೆ. ಈ ರೀತಿಯಾಗಿ ಮುಟ್ಟಿನ ನೋವು ತೀವ್ರವಾಗಿದ್ದಲ್ಲಿ ತಕ್ಷಣವೇ ಪರೀಕ್ಷಿಸಿಕೊಳ್ಳಬೇಕು.