ಕೆಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಸೀನುವಿಕೆ ಆರಂಭವಾದರೆ ಕನಿಷ್ಠ 10 ಗಂಟೆಯ ತನಕ ನಿಲ್ಲುವುದೇ ಇಲ್ಲ. ಮತ್ತೆ ಸಂಜೆ ವೇಳೆ ಕಾಣಿಸಿಕೊಂಡರೆ ರಾತ್ರಿಯಾಗುವಾಗ ಹೈರಾಣಾಗಿಸಿ ಬಿಡುತ್ತದೆ. ಇದಕ್ಕೆ ಅಲರ್ಜಿಯೇ ಮುಖ್ಯ ಕಾರಣವಾದರೂ ಸೀನುವಿಕೆ ಹಾಗೂ ಮೂಗಿನಿಂದ ನೀರು ಸುರಿಯುವುದಕ್ಕೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು.
ಎಲೆಕ್ಟ್ರಾನಿಕ್ ಸ್ಟೀಮರ್ ತೆಗೆದುಕೊಳ್ಳಿ. ಹಬೆಯನ್ನು ಮೂಗಿನೊಳಗೆ ದೀರ್ಘ ಶ್ವಾಸದ ಮೂಲಕ ತೆಗೆದುಕೊಳ್ಳಿ. ಬೆಳಗ್ಗೆ ಹಾಗೂ ಸಂಜೆ ವೇಳೆ 5 ನಿಮಿಷ ಹೀಗೆ ಮಾಡಿದರೆ ಸಾಕು. ಮೂಗಿನ ಹಾದಿ ಸಲೀಸಾಗಿ ಸೀನುವ ಹಾಗೂ ಮೂಗಿನಿಂದ ನೀರಿಳಿಯುವ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ರಾತ್ರಿ ವೇಳೆ ಹೆಚ್ಚು ಸೀನುತ್ತಿದ್ದರೆ ಹೊಟ್ಟೆ ತುಂಬಾ ತಿನ್ನುವುದನ್ನು ಕಡಿಮೆ ಮಾಡಿ. ಬೆಳಗ್ಗೆ ಎದ್ದಾಕ್ಷಣ ಸೂರ್ಯನ ಬೆಳಕನ್ನು ನೋಡದಿರಿ. ಮನೆಯಿಂದ ಹೊರಹೋಗುವಾಗ ಸನ್ ಗ್ಲಾಸ್ ಹಾಕಿಕೊಳ್ಳಿ.
ಬೆಳಿಗ್ಗೆ ಎದ್ದಾಕ್ಷಣ ಬಿಸಿನೀರಿಗೆ ಜೇನುತುಪ್ಪ ಹಾಕಿ ಕುಡಿಯಿರಿ. ಇದು ಅಲರ್ಜಿಗಳನ್ನು ದೂರ ಮಾಡುತ್ತದೆ. ಸೀನುವಾಗ ಮೂಗಿನ ಹೊಳ್ಳೆಗಳನ್ನು ಒತ್ತಿ ಹಿಡಿಯುವುದರಿಂದಲೂ ಸೀನುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.