ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಈಗ ಯುವಕ – ಯುವತಿಯರ ಕೂದಲು ಬೆಳ್ಳಗಾಗುತ್ತವೆ. ಯೌವನದಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಹಾಗಾಗಿ, ಕೂದಲು ಬಿಳಿಯಾಗುವುದು ಆರಂಭವಾಗುತ್ತಲೇ ಹಲವು ಕ್ರಮಗಳನ್ನು ಅನುಸರಿಸುವುದು ಒಳಿತು ಎಂದು ತಜ್ಞರು ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ.
ಅನುವಂಶಿಕವಾಗಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಉಂಟಾದ ಕಾರಣ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತವೆ. ನಾವು ಎಷ್ಟು ಪೌಷ್ಟಿಕಾಂಶಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತೇವೆಯೋ ಅಷ್ಟು ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು, ತರಕಾರಿ ಹೆಚ್ಚು ತಿನ್ನುವುದರಿಂದ ಕೂದಲು ಬೆಳ್ಳಗಾಗುವುದನ್ನು ನಿಯಂತ್ರಿಸಬಹುದಾಗಿದೆ. ಹಾಗೆಯೇ, ಕೂದಲಿಗೆ ಹೆಚ್ಚಿನ ಬಿಸಿಲು ತಾಗದಂತೆ ನೋಡಿಕೊಳ್ಳುವುದು, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ಸೋಡಿಯಂ ಕ್ಲೊರೈಡ್, ಸಲ್ಫೇಟ್‌ಗಳನ್ನು ತ್ಯಜಿಸುವುದು, ಅತಿಯಾದ ಶಾಂಪೂ ಬಳಕೆ ಮಾಡದಿರುವುದು ಸೇರಿ ಹಲವು ಕ್ರಮಗಳ ಮೂಲಕ ಕೂದಲು ಬಿಳಿಯಾಗುವುದನ್ನು ತಡೆಯಬಹುದಾಗಿದೆ.
ನಾವು ಸೇವಿಸುವ ಪೌಷ್ಟಿಕ ಆಹಾರದಿಂದಲೇ ಕೂದಲು ಸದೃಢವಾಗಿ ಇರಲು, ಅವುಗಳ ಕೋಶಗಳು ಬಿಳಿಯಾಗದಂತೆ ತಡೆಯುತ್ತವೆ. ಹಾಗಾಗಿ, ಬರೀ ಹೋಟೆಲ್ ಊಟ – ತಿಂಡಿ ಮೇಲೆ ಅವಲಂಬನೆಯಾಗದೆ, ಕುರುಕಲು ತಿಂಡಿಗಳನ್ನು ಜಾಸ್ತಿ ತಿನ್ನದೆ, ಫಾಸ್ಟ್‌ಫುಡ್ ಮೊರೆ ಹೋಗದೆ ಕಡಿಮೆ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದನ್ನು ನಿಯಂತ್ರಿಸಬಹುದಾಗಿದೆ.
ಇಲ್ಲದಿದ್ದರೆ ಹೇರ್ ಡೈ ಹಿಡಿದು ಕನ್ನಡಿ ಎದುರು ನಿಲ್ಲಬೇಕಾಗುತ್ತದೆ. ಮಾನಸಿಕವಾಗಿ ನೋವು-ಸಂಕಟ, ಆಪ್ತರಿಂದ ಮೂದಲಿಕೆಯ ಮಾತುಗಳನ್ನು ಕೇಳಬೇಕಾಗುತ್ತದೆ. ಹಾಗಾಗಿ ಕೂದಲು ಬೆಳ್ಳಗಾಗುವ ಮೊದಲೇ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸಕಲ ರೀತಿಯಲ್ಲಿ ಒಳಿತು ಎಂಬುದು ತಜ್ಞರ ಸಲಹೆಗಳಾಗಿವೆ.