ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು ಅನೇಕ ಕಾರಣಗಳಿವೆ. ಅದ್ರಲ್ಲಿ ನಮ್ಮ ಜೀವನ ಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ನಮ್ಮ ದಿನನಿತ್ಯದ ಕೆಲಸಗಳಲ್ಲಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿದ್ರೆ ಬಿಳಿ ಕೂದಲು ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಳಿ ಕೂದಲು ಕಾಣಿಸಿಕೊಳ್ಳಲು ಒತ್ತಡವೂ ಒಂದು ಕಾರಣ. ಒತ್ತಡದಿಂದ ಕೂದಲು ಬಿಳಿಯಾಗುವ ಜೊತೆಗೆ ಕೂದಲು ಉದುರಲು ಶುರುವಾಗುತ್ತದೆ. ಹಾಗಾಗಿ ಅನಾವಶ್ಯಕ ಒತ್ತಡ ಬಿಟ್ಟುಬಿಡಿ. ಒತ್ತಡದಿಂದ ಮುಕ್ತಿ ಪಡೆಯಲು ಧ್ಯಾನ, ವ್ಯಾಯಾಮದ ಮೊರೆ ಹೋಗಿ.
ಆಹಾರದಲ್ಲಾದ ಬದಲಾವಣೆ ಕೂಡ ನಿಮ್ಮ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಪೌಷ್ಠಿಕ ಆಹಾರ ಸೇವನೆ ಶುರು ಮಾಡಿ. ಫಾಸ್ಟ್ ಫುಡ್ ಗಳಿಂದ, ಕರಿದ ಆಹಾರಗಳಿಂದ ದೂರವಿರಿ.
ಅಕಾಲಿಕ ಬಿಳಿ ಕೂದಲಿಗೆ ಧೂಮಪಾನ ಕೂಡ ಮುಖ್ಯ ಕಾರಣ. ಧೂಮಪಾನ ತ್ಯಜಿಸಿದ್ರೆ ಬಿಳಿ ಕೂದಲಿನ ಸಂಖ್ಯೆ ಕಡಿಮೆಯಾಗುತ್ತದೆ.
ಒಳ್ಳೆಯ ನಿದ್ರೆ ಆರೋಗ್ಯಕ್ಕೆ ಹಾಗೂ ಕಪ್ಪು ಕೂದಲಿಗೆ ಬಹಳ ಮುಖ್ಯ. ಉತ್ತಮ ನಿದ್ರೆ ಒತ್ತಡ ಕಡಿಮೆ ಮಾಡುತ್ತದೆ. ಆರೋಗ್ಯದಲ್ಲಿ ಸುಧಾರಣೆ ತರುತ್ತದೆ.
ಬಹುತೇಕರು ಕೂದಲು ಜಿಡ್ಡಾಗುತ್ತದೆ ಎನ್ನುವ ಕಾರಣಕ್ಕೆ ಕೂದಲಿಗೆ ಎಣ್ಣೆ ಹಾಕುವುದಿಲ್ಲ. ಆದ್ರೆ ಇದು ತಪ್ಪು. ನಿಯಮಿತವಾಗಿ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡುವುದ್ರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.