ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು ನೋಡೋಣ.
ಆಯುರ್ವೇದದ ಪ್ರಕಾರ ಊಟದ ಪ್ರಕ್ರಿಯೆಯಲ್ಲಿ ಶ್ರದ್ಧೆ ಇರಬೇಕು. ಊಟ ಮಾಡುವಾಗ ಆಹಾರ ಪದಾರ್ಥದ ಪರಿಮಳ, ರುಚಿ ಮತ್ತು ವಿನ್ಯಾಸದ ಬಗ್ಗೆ ಸಂಪೂರ್ಣ ಗಮನ ಇರಬೇಕು. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಊಟಕ್ಕೂ ಮುನ್ನ ನೀರು ಕುಡಿಯುವುದು : ಆಯರ್ವೇದದ ಪ್ರಕಾರ ಊಟಕ್ಕೂ ಮುನ್ನ ಅಗ್ನಿ ಅಥವಾ ಪಚನದ ಬೆಂಕಿಯನ್ನು ಶಮನಗೊಳಿಸಬೇಕು. ಇದಕ್ಕಾಗಿ ನೀವು ಒಂದು ಇಂಚಿನಷ್ಟು ಉತ್ತದ ತಾಜಾ ಶುಂಠಿ, ನಾಲ್ಕಾರು ಹನಿ ನಿಂಬೆರಸ ಹಾಗೂ ಚಿಟಿಕೆ ಉಪ್ಪು ಹಾಕಿ ಊಟಕ್ಕೂ ಮೊದಲು ಸೇವಿಸಬೇಕು. ಇದು ಆಹಾರದ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುವ ಕಿಣ್ವಗಳ ಉತ್ಪತ್ತಿ ಗ್ರಂಥಿಯನ್ನು ಪ್ರಚೋದಿಸುತ್ತದೆ.
ಊಟದ ಮಧ್ಯೆ ನೀರು ಕುಡಿಯುವುದು : ಊಟದ ನಡುವೆ ಹೆಚ್ಚಾಗಿ ನೀರು ಕುಡಿಯುವುದು ಒಳ್ಳೆಯದಲ್ಲ. ಹಾಗಾಗಿ ಆಹಾರಕ್ಕೆ ಅತಿಯಾಗಿ ಉಪ್ಪು ಹಾಕಬೇಡಿ. ಉಪ್ಪು ಜಾಸ್ತಿಯಾದರೆ ಬಾಯಾರಿಕೆ ಉಂಟಾಗುತ್ತದೆ. ಅವಸರವಸರವಾಗಿ ಊಟ ಮಾಡುವುದು ಕೂಡ ತಪ್ಪು. ಯಾವುದೇ ಕಾರಣಕ್ಕೂ ಐಸ್ ವಾಟರ್ ಕುಡಿಯಬೇಡಿ.
ಊಟದ ನಂತರ ನೀರು ಕುಡಿಯುವುದು : ಊಟವಾದ ತಕ್ಷಣ ನೀರನ್ನು ಕುಡಿಯಬೇಡಿ. ಊಟ ಮಾಡಿ 15 ನಿಮಿಷಗಳ ನಂತರ ನೀರು ಕುಡಿಯಿರಿ. ಊಟವಾಗಿ 45 ನಿಮಿಷಗಳ ನಂತರ ಬಾಯಾರಿಕೆಯಾಗಿದ್ದರೆ ನಿಮಗೆ ಬೇಕಾದಷ್ಟು ನೀರು ಕುಡಿಯಬಹುದು.
ಎಷ್ಟು ನೀರು ಕುಡಿಯಬೇಕು : ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಬೇಕು ಅಂತಾನೇ ಎಲ್ಲರೂ ಹೇಳ್ತಾರೆ. ಆದ್ರೆ ಆಯುರ್ವೇದದ ನಿಯಮವೇ ಬೇರೆ. ಆಹಾರ, ನೀರು, ನಿದ್ರೆ ಯಾವುದೇ ಆಗಿದ್ದರೂ ಬೇಕಾದಾಗ ಮಾತ್ರ ಸೇವಿಸಬೇಕು. ನಿದ್ದೆ ಬಂದಾಗ ಮಾತ್ರ ಮಾಡಬೇಕು.