ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ ಹುದ್ದೆ ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದ್ದು, 60ಕ್ಕೂ ಹೆಚ್ಚು ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ನೀಡಿ ಆಯ್ಕೆಯಾಗಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2022ರ ಅಕ್ಟೋಬರ್ ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗೆ ಪಿಯುಸಿಯಲ್ಲಿ ಫೇಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದಾರೆ.
ಇವರೆಲ್ಲರೂ ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷ ಜೂನ್ 27ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆಯ್ಕೆಯಾದ 182 ಅಭ್ಯರ್ಥಿಗಳಲ್ಲಿ 62 ಅಭ್ಯರ್ಥಿಗಳು ನಕಲಿ ಅಂಕಪಟ್ಟಿಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ವೇಳೆ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
62 ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ನೋಂದಣಿ ಸಂಖ್ಯೆಯನ್ನು ತಿದ್ದಿದ್ದಾರೆ. ಹೆಚ್ಚಿನ ಅಂಕಪಡೆದವರ ಅಂಕಪಟ್ಟಿ ಪಡೆದು ಅದನ್ನು ತಮ್ಮ ಅಂಕಪಟ್ಟಿಗೆ ಅಂಟಿಸಿ ಅರ್ಜಿ ಸಲ್ಲಿಸಿದ್ದಾರೆ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಅಂಕಪಟ್ಟಿ ನೀಡಿದ ಕಾರಣಕ್ಕೆ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ರವಿಕುಮಾರ್ ಎಂಬುವವರಿಗೆ ಸಿಸಿಬಿ ನೋಟಿಸ್ ನೀಡಿದೆ.
ಇದೇರೀತಿ 62 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ನಡೆದಿದೆ.