ಮ್ಯಾಂಚೆಸ್ಟರ್: ಯುಕೆ ರೆಸ್ಟೋರೆಂಟ್ ವೊಂದರ ಹೊರಗಡೆ ಇರಿಸಲಾಗಿರುವ ಕುರ್ಚಿಯ ವಿಡಿಯೋ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಆ ಕಬ್ಬಿಣದ ಕುರ್ಚಿಯಲ್ಲೇನು ವಿಶೇಷವಿದೆ ಅಂತಾ ಆಶ್ಚರ್ಯ ಪಡುತ್ತಿದ್ದೀರಾ..? ಹಾಗಿದ್ರೆ ಈ ಸ್ಟೋರಿ ಓದಿ.
ಈ ಕಬ್ಬಿಣದ ಕುರ್ಚಿಯ ಹಿಂಭಾಗದಲ್ಲಿ ಮರಾಠಿ ಹೆಸರು ಮತ್ತು ಹಳ್ಳಿಯ ಹೆಸರನ್ನು ಬರೆಯಲಾಗಿದೆ. ‘ಬಾಲು ಲೋಖಂಡೆ, ಸಾವ್ಲಾಜ್’ ಅಂತಾ ಮರಾಠಿಯಲ್ಲಿ ಕುರ್ಚಿಯ ಹಿಂಭಾಗದಲ್ಲಿ ಬರೆಯಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾವ್ಲಾಜ್ ಗ್ರಾಮದಿಂದ ಮ್ಯಾಂಚೆಸ್ಟರ್‌ನ ಅಲ್ಟ್ರಿಂಚಮ್ ಪ್ರದೇಶಕ್ಕೆ ಕುರ್ಚಿಯು 7,627 ಕಿಲೋಮೀಟರ್ ಹೇಗೆ ಪ್ರಯಾಣಿಸಿತು ಎಂಬುದು ನೆಟ್ಟಿಗರಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಸಾವ್ಲಾಜ್‌ನ ಮಂಟಪ ಡೆಕೊರೇಟರ್ ಬಾಲು ಲೋಖಂಡೆ ಎಂಬುವವರು ತಮ್ಮ ವ್ಯಾಪಾರವನ್ನು ಆರಂಭಿಸಿದಾಗ ಈ ಕುರ್ಚಿಯನ್ನು ಖರೀದಿಸಿದ್ದರು. ಅವರು ಕರ್ನಾಟಕದ ಹುಬ್ಬಳ್ಳಿಯಿಂದ ಕುರ್ಚಿಗಳನ್ನು ಖರೀದಿಸಿದ್ದರು. ಕಾಲಾನಂತರದಲ್ಲಿ, ಗ್ರಾಹಕರು ಪ್ಲಾಸ್ಟಿಕ್ ಕುರ್ಚಿಗಳನ್ನು ಕೇಳಲು ಆರಂಭಿಸಿದಂತೆ ಕಬ್ಬಿಣದ ಕುರ್ಚಿಗಳ ಬೇಡಿಕೆ ಕಡಿಮೆಯಾಯಿತು. 13 ಕಿಲೋಗ್ರಾಂಗಳಷ್ಟು ತೂಕದ ಕುರ್ಚಿಗಳನ್ನು ನಿರ್ವಹಿಸಲು ಕಷ್ಟವಾಯಿತಂತೆ.
ಈ ಕಬ್ಬಿಣದ ಕುರ್ಚಿಗಳನ್ನು ಸುಮಾರು 15 ವರ್ಷಗಳ ಹಿಂದೆ 10 ರೂ. ಹಾಗೆ ಮಾರಲು ಲೋಖಂಡೆ ನಿರ್ಧರಿಸಿ, ಮುಂಬೈಗೆ ಮಾರಾಟ ಮಾಡಿದ್ರು. ತದನಂತರ ವಿದೇಶಿ ಉದ್ಯಮಿಗಳು ಪುರಾತನ ಕುರ್ಚಿಗಳಂತೆ ಇವನ್ನು ಖರೀದಿಸಿದರು. ಸದ್ಯ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, 29,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.