10 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಆಯ್ಕೆ ಮಾಡೋದ್ರ ಜೊತೆಯಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್ ಈ ವಿಮಾ ಕವರ್ ಆಯ್ಕೆಯಿಂದ ಹೊರಗುಳಿಯುವ ಅನುಮತಿಯನ್ನು ನೀಡುವ ಮೂಲಕ ವಿಮಾ ಯೋಜನೆಯನ್ನು ಬದಲಾಯಿಸಲಾಗಿದೆ.
ಇನ್ನೊಂದು ರೀತಿಯಲ್ಲಿ ಹೇಳೋದಾದ್ರೆ ಐಆರ್ಸಿಟಿಸಿ ಪೋರ್ಟಲ್ನಲ್ಲಿ ತಮ್ಮ ರೈಲು ಟಿಕೆಟ್ನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಈಗ ಸ್ವಯಂ ಚಾಲಿತವಾಗಿ 10 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ವಿಮಾ ರಕ್ಷಣೆಯನ್ನು ಬಯಸದವರು ಸೂಕ್ತವಾದ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಇದರಿಂದ ಹೊರಗೊಳಿಯಬೇಕಾಗುತ್ತದೆ. 10 ಲಕ್ಷ ರೂಪಾಯಿ ವೈಯಕ್ತಿಕ ಅಪಘಾತ ವಿಮೆಗೆ ವಿಧಿಸಲಾದ ಪ್ರೀಮಿಯಂ ಕೇವಲ 0.35 ಪೈಸೆ ಆಗಿದೆ. ಪ್ರಯಾಣದ ಸಂದರ್ಭದಲ್ಲಿ ಸಂಭವಿಸುವ ಸಾವು, ಅಂಗವೈಕಲ್ಯ ಅಥವಾ ವೈದ್ಯಕೀಯ ವೆಚ್ಚಗಳನ್ನು ಇದು ಭರಿಸುತ್ತದೆ.
ಕಳೆದ ತಿಂಗಳು ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 288 ಪ್ರಯಾಣಿಕರು ಸಾವನ್ನಪ್ಪಿದ್ದರು ಹಾಗೂ 1 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಐ ಆರ್ ಸಿ ಟಿ ಸಿ ಪ್ರಯಾಣ ಅಪಘಾತ ವಿಮಾ ಯೋಜನೆಯ ಅಡಿಯಲ್ಲಿ ಒಟ್ಟು 624 ಪ್ರಯಾಣಿಕರು ವಿಮಾ ರಕ್ಷಣೆ ಹೊಂದಿದ್ದರು ಎಂದು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.