ನವದೆಹಲಿ: ಆರೋಗ್ಯ ದೃಷ್ಟಿಯಿಂದ ಸ್ಥಳೀಯ, ಪ್ರಾದೇಶಿಕ ಅಗತ್ಯಗಳ ಅನುಸಾರ ಹಾಗೂ ಮಕ್ಕಳು, ಮಧುಮೇಹಿಗಳು ಮತ್ತು ಆರೋಗ್ಯಕ್ಕೆ ಪೂರಕವಾದ ತಿನಿಸುಗಳ ಸೇರ್ಪಡೆ ಕುರಿತು ಮುಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರೈಲ್ವೆ ಮಂಡಳಿಯು ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (ಐಆರ್ಸಿಟಿಸಿ) ನೀಡಿದೆ.
ರೈಲುಗಳಲ್ಲಿನ ಅಡುಗೆ ಸೇವೆಗಳನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಮಂಡಳಿಯು ಕಳುಹಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲುಗಳಲ್ಲಿ ಅಡುಗೆ ಸೇವೆಯನ್ನು ಸುಧಾರಿಸುವ ಸಲುವಾಗಿ, ಪ್ರಾದೇಶಿಕ ಆಹಾರ ಪದ್ಧತಿಗಳು, ಕಾಲಕ್ಕೆ ತಕ್ಕಂತೆ ಮಾಡಬಹುದಾದ ಭಕ್ಷ್ಯಗಳು, ಹಬ್ಬಗಳ ಸಮಯದಲ್ಲಿ ಹೀಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಒಳಗೊಂಡಂತೆ ಸೂಕ್ತ ಆಹಾರ ನೀಡುವ ಕುರಿತು ಮಾಹಿತಿಗೆ ಐಆರ್‌ಟಿಸಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಸಕ್ಕರೆ ಕಾಯಿಲೆ ಹೊಂದಿರುವವರಿಗೆ, ಮಕ್ಕಳಿಗೆ ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವ ಪ್ರಯಾಣಿಕರಿಗೆ ರಾಗಿ ಆಧರಿತ ಸ್ಥಳೀಯ ಉತ್ಪನ್ನಗಳನ್ನು ನೀಡುವಂತೆ ಸೂಚಿಸಲಾಗಿದೆ.