ಇರಾಕ್ ಸಂಸತ್ತು ಮಂಗಳವಾರ ಮೂರು ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಿದೆ. ಇದರಲ್ಲಿ ದೇಶದ ವೈಯಕ್ತಿಕ ಸ್ಥಿತಿ ಕಾನೂನಿಗೆ ತಿದ್ದುಪಡಿಗಳನ್ನು ಸೇರಿಸಲಾಗಿದೆ. ವಿರೋಧ ಪಕ್ಷದವರು, ಈ ತಿದ್ದುಪಡಿಗಳು ಮಕ್ಕಳ ಮದುವೆಯನ್ನು ಕಾನೂನುಬದ್ಧಗೊಳಿಸುತ್ತವೆ ಎಂಬ ಕಾರಣಕ್ಕೆ ವಿರೋಧಿಸಿದ್ದಾರೆ.
ಈ ತಿದ್ದುಪಡಿಗಳಿಂದ ಈಗ ಇಸ್ಲಾಮಿಕ್ ನ್ಯಾಯಾಲಯಗಳು ಕುಟುಂಬ ವಿಷಯಗಳಾದ ವಿವಾಹ, ವಿಚ್ಛೇದನ ಮತ್ತು ಆನುವಂಶಿಕತೆಯ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಲಿವೆ.
ಇರಾಕ್ ಕಾನೂನು ಈಗಾಗಲೇ ಹೆಚ್ಚಿನ ಸಂದರ್ಭಗಳಲ್ಲಿ 18 ವರ್ಷಗಳನ್ನು ಮದುವೆಯ ಕನಿಷ್ಠ ವಯಸ್ಸು ಎಂದು ನಿಗದಿಪಡಿಸಿದೆ. ಈಗ ತಂದಿರುವ ಬದಲಾವಣೆಗಳ ಪರವಾಗಿ ವಾದಿಸಿದ ಕೆಲ ಜನಪ್ರತಿನಿಧಿಗಳು, ಅವುಗಳನ್ನು ಇಸ್ಲಾಮಿಕ್ ತತ್ವಗಳೊಂದಿಗೆ ಕಾನೂನನ್ನು ಹೊಂದಿಸುವ ಮತ್ತು ಇರಾಕಿ ಸಂಸ್ಕೃತಿಯ ಮೇಲೆ ಪಶ್ಚಿಮದ ಪ್ರಭಾವವನ್ನು ಕಡಿಮೆ ಮಾಡುವ ಮಾರ್ಗವೆಂದು ಸಮರ್ಥಿಸಿಕೊಂಡಿದ್ದಾರೆ.
ಇರಾಕ್ ಮಹಿಳಾ ಲೀಗ್ ಸದಸ್ಯರಾದ ಮಾನವ ಹಕ್ಕುಗಳ ಕಾರ್ಯಕರ್ತೆ ಇಂತಿಸಾರ್ ಅಲ್-ಮಯಾಲಿ “ಬಾಲ್ಯದಲ್ಲಿಯೇ ಹುಡುಗಿಯರ ವಿವಾಹ, ಮಕ್ಕಳಾಗಿ ಅವರ ಜೀವನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ವಿಚ್ಛೇದನ, ಪೋಷಣೆ ಮತ್ತು ಆನುವಂಶಿಕತೆಗಾಗಿ ಮಹಿಳೆಯರಿಗೆ ರಕ್ಷಣಾ ಕಾರ್ಯವಿಧಾನಗಳನ್ನು ಅಡ್ಡಿಪಡಿಸುತ್ತದೆ. ಇದು ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ.
“ಸದನದಲ್ಲಿ ಉಪಸ್ಥಿತರಿದ್ದ ಅರ್ಧದಷ್ಟು ಶಾಸಕರು ಮತ ಚಲಾಯಿಸಲಿಲ್ಲ, ಇದು ಕಾನೂನು ಕೋರಂ ಉಲ್ಲಂಘಿಸಿದೆ” ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಒಬ್ಬ ಸಂಸದೀಯ ಅಧಿಕಾರಿ ತಿಳಿಸಿದರು.
ಸದನದ ನಂತರ, ಹಲವಾರು ಶಾಸಕರು ಮತದಾನ ಪ್ರಕ್ರಿಯೆಯ ಬಗ್ಗೆ ದೂರು ನೀಡಿದ್ದು, ಈ ಮೂರು ವಿವಾದಾತ್ಮಕ ಕಾನೂನುಗಳನ್ನು ಒಟ್ಟಿಗೆ ಮತ ಚಲಾಯಿಸಲಾಯಿತು ಎಂದಿದ್ದಾರೆ.
“ನಾಗರಿಕ ಸ್ಥಿತಿ ಕಾನೂನಿನ ವಿಷಯದಲ್ಲಿ, ನಾವು ಬಲವಾಗಿ ಬೆಂಬಲಿಸುತ್ತಿದ್ದೇವೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ” ಎಂದು ಸ್ವತಂತ್ರ ಸಂಸದ ರೇಯ್ಡ್ ಅಲ್ ಮಲಿಕಿ ಹೇಳಿದ್ದು, “ಆದರೆ ಇತರ ಕಾನೂನುಗಳೊಂದಿಗೆ ಒಟ್ಟಿಗೆ ಮತ ಚಲಾಯಿಸಲು ಸಂಯೋಜಿಸಲಾಗಿತ್ತು ಮತ್ತು ಇದು ಫೆಡರಲ್ ನ್ಯಾಯಾಲಯದಲ್ಲಿ ಕಾನೂನು ಮೇಲ್ಮನವಿಗೆ ಕಾರಣವಾಗಬಹುದು.” ಎಂದು ಅಭಿಪ್ರಾಯಪಟ್ಟಿದ್ದಾರೆ.