
ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ.
ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಪೂರ್ವದಲ್ಲಿರುವ ಕೆರ್ಮಾನ್ ಪ್ರಾಂತ್ಯದ ಪ್ರವಾಸಿ ಆಕರ್ಷಣೆ ಮಹಾನ್ ಗಾರ್ಡನ್‌ನ ಪಾರ್ಕಿಂಗ್ ಲಾಟ್‌ನಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆ ತಮ್ಮ ಕುಟುಂಬದೊಂದಿಗೆ ಬಂದರು ನಗರ ಬಂದರ್ ಅಬ್ಬಾಸ್‌ನಿಂದ ಇಲ್ಲಿಗೆ ಬಂದಿದ್ದರು.
ಈ ವೇಳೆ ಮೃತ ಮಹಿಳೆಯ ಕುಟುಂಬದ ಮಹಿಳೆಯೊಬ್ಬರು ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸಂಪ್ರದಾಯವಾದಿಗಳ ಗುಂಪು ಹಲ್ಲೆ ಮಾಡಿದೆ. ಇದೇ ವೇಳೆ ಬಸೀಜ್ ಎಂಬ ತೀವ್ರವಾದಿ ಸಂಘಟನೆಯೊಂದರ ಸದಸ್ಯ ಮಹಿಳೆಗೆ ಹಿಜಾಬ್ ಧರಿಸುವಂತೆ ಆದೇಶ ನೀಡಿದ್ದಾನೆ. ಘಟನೆಯಲ್ಲಿ 59 ವರ್ಷದ ಮಹಿಳೆ ಹಾಗೂ ಇನ್ನಿತರರಿಗೆ ಗಾಯಗಳಾಗಿವೆ.
ಇದೇ ತಿಂಗಳ ಆರಂಭದಲ್ಲಿ, ಇರಾನ್‌ನ ವಾಯುವ್ಯ ಭಾಗದಲ್ಲಿರುವ ನಗರ ಮಶಾದ್‌ನಲ್ಲಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸಂಪ್ರದಾಯವಾದಿಯೊಬ್ಬ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿದ್ದ. ಕೂಡಲೇ ಇಬ್ಬರೂ ಮಹಿಳೆಯನ್ನು ಬಂಧಿಸಿದ್ದಲ್ಲದೇ, ಅದಕ್ಕಾಗಿ ಅವರಿಗೆ ಶಿಕ್ಷೆಯನ್ನೂ ಘೋಷಿಸಿತ್ತು ಸ್ಥಳೀಯ ನ್ಯಾಯಾಲಯ. ಇದೇ ವೇಳೆ ಹಲ್ಲೆಕೋರನನ್ನು ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಆಪಾದನೆ ಮೇಲೆ ಶಿಕ್ಷಿಸಲಾಗಿತ್ತು.