ಟೆಹ್ರಾನ್: ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ವರ್ಚುವಲ್ ಕನ್ಸರ್ಟ್ ಮಾಡಿದ ಮಹಿಳಾ ಗಾಯಕಿಯನ್ನು ಇರಾನ್ ಅಧಿಕಾರಿಗಳು ಬಂಧಿಸಿದ್ದಾರೆ.
27 ವರ್ಷದ ಪರಸ್ತೂ ಅಹ್ಮದಿ ಅವರನ್ನು ಉತ್ತರ ಪ್ರಾಂತ್ಯದ ಮಜಂದರನ್‌ನ ರಾಜಧಾನಿ ಸಾರಿ ನಗರದಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಇರಾನ್‌ನ ವಕೀಲ ಮಿಲಾದ್ ಪನಾಹಿಪುರ ತಿಳಿಸಿದ್ದಾರೆ.
ಗುರುವಾರ ಅಹ್ಮದಿ ಅವರು ತೋಳುಗಳಿಲ್ಲದ ಮತ್ತು ಕಾಲರ್‌ಲೆಸ್ ಡ್ರೆಸ್ ಧರಿಸಿ ಮತ್ತು ಹಿಜಾಬ್ ಇಲ್ಲದೆ ಪ್ರದರ್ಶಿಸಿದ ಸಂಗೀತ ಕಾರ್ಯಕ್ರಮದ ವಿರುದ್ಧ ನ್ಯಾಯಾಂಗವು ಪ್ರಕರಣವನ್ನು ದಾಖಲಿಸಿದೆ. ಪ್ರದರ್ಶನದ ಸಮಯದಲ್ಲಿ ನಾಲ್ವರು ಪುರುಷ ಸಂಗೀತಗಾರರು ಸಹ ಅವರೊಂದಿಗೆ ಇದ್ದರು.
ಅಹ್ಮದಿ ಅವರು ಬುಧವಾರ ಯೂಟ್ಯೂಬ್‌ನಲ್ಲಿ ಕನ್ಸರ್ಟ್ ವೀಡಿಯೊವನ್ನು ಪೋಸ್ಟ್ ಮಾಡಿ “ನಾನು ಪರಸ್ಟೂ, ನಾನು ಪ್ರೀತಿಸುವ ಜನರಿಗಾಗಿ ಹಾಡಲು ಬಯಸುವ ಹುಡುಗಿ. ಇದು ನಾನು ನಿರ್ಲಕ್ಷಿಸಲು ಸಾಧ್ಯವಾಗದ ಹಕ್ಕು; ನಾನು ಉತ್ಸಾಹದಿಂದ ಪ್ರೀತಿಸುವ ಭೂಮಿಗಾಗಿ ಹಾಡುತ್ತೇನೆ.”ಎಂದು ಬರೆದಿದ್ದಾರೆ.
ಈ ವೀಡಿಯೊವು 1.6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ. ಅಹ್ಮದಿಯ ಬ್ಯಾಂಡ್ ನ ಇತರ ಇಬ್ಬರು ಸಂಗೀತಗಾರರಾದ ಸೊಹೇಲ್ ಫಾಘಿಹ್ ನಾಸಿರಿ ಮತ್ತು ಎಹ್ಸಾನ್ ಬೈರಾಗ್ದರ್ ಅವರನ್ನು ಶನಿವಾರ ಟೆಹ್ರಾನ್‌ನಲ್ಲಿ ಬಂಧಿಸಲಾಗಿದೆ ಎಂದು ಪನಾಹಿಪುರ ಅವರು ಹೇಳಿದ್ದಾರೆ.
ಇರಾನ್‌ನಲ್ಲಿ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಮಹಿಳೆಯರು ಮೊದಲು ಹಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ನಂತರ ಅವರು ಮಿಶ್ರ ಲಿಂಗ ಪ್ರೇಕ್ಷಕರ ಮುಂದೆ ಹಾಡಲು ಅಥವಾ ನೃತ್ಯ ಮಾಡುವುದನ್ನು ನಿಷೇಧಿಸಲಾಯಿತು. ಅಲ್ಲದೆ, ಇರಾನ್ ಮತ್ತು ಇಸ್ಲಾಮಿಕ್ ಕಾನೂನಿನ ಪ್ರಕಾರ, ಮಹಿಳೆಯರಿಗೆ ಸಂಬಂಧವಿಲ್ಲದ ಪುರುಷರ ಮುಂದೆ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳಲು ಅನುಮತಿಸಲಾಗುವುದಿಲ್ಲ.