ಇರಾಕ್ ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯ ಪರಿಣಾಮ ಉನ್ನತ ಶ್ರೇಣಿಯ ಮಿಲಿಟರಿ ಕಮಾಂಡರ್ ಅಧಿಕಾರಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಪ್ರಬಲ ಕಟೈಬ್ ಹಿಜ್ಬುಲ್ಲಾ ಮಿಲಿಟಿಯಾದ ಮೂವರು ಸದಸ್ಯರು ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪೂರ್ವ ಬಾಗ್ದಾದ್ನ ಮಸ್ಟಲ್ ಪ್ರದೇಶದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯುಎಸ್ ಈ ದಾಳಿಯಲ್ಲಿ ಹಿರಿಯ ಕಟೈಬ್ ಹಿಜ್ಬುಲ್ಲಾ ಕಮಾಂಡರ್ ಅನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಒಬ್ಬನನ್ನು ವಿಸ್ಸಾಮ್ ಮೊಹಮ್ಮದ್ ಅಬು ಬಕರ್ ಅಲ್-ಸಾದಿ ಎಂದು ಗುರುತಿಸಲಾಗಿದೆ ಎಂದು ಇರಾಕ್ನಲ್ಲಿರುವ ಇರಾನ್ ಬೆಂಬಲಿತ ಮಿಲಿಟಿಯಾದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಸಿರಿಯಾದಲ್ಲಿ ಕಟೈಬ್ ಹಿಜ್ಬುಲ್ಲಾ ಕಾರ್ಯಾಚರಣೆಯ ಉಸ್ತುವಾರಿ ಕಮಾಂಡರ್ ಆಗಿದ್ದರು.
ಈ ಹಿಂದೆ, ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳ ಡಜನ್ಗಟ್ಟಲೆ ಗುರಿಗಳ ಮೇಲೆ ಯುಎಸ್ ದಾಳಿ ನಡೆಸಿತ್ತು, ಇದರಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆಯ ಮಧ್ಯೆ ಈ ದಾಳಿ ಮತ್ತೊಮ್ಮೆ ನಡೆದಿದೆ. ಜೋರ್ಡಾನ್ ಸೇನಾ ನೆಲೆಯ ಮೇಲೆ ನಡೆದ ದಾಳಿಗೆ ಇರಾಕ್ ನ ಇಸ್ಲಾಮಿಕ್ ಪ್ರತಿರೋಧವೇ ಕಾರಣ ಎಂದು ಅಮೆರಿಕ ಆರೋಪಿಸಿದೆ. ಹತ್ಯೆಗೀಡಾದ ಮಿಲಿಟಿಯಾ ಕಮಾಂಡರ್ ಕಟೈಬ್ ಹಿಜ್ಬುಲ್ಲಾ ಇಸ್ಲಾಮಿಸ್ಟ್ ಗುಂಪಿನ ನಾಯಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.