ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ 6 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸಿ.ಹೆಚ್.ಪ್ರತಾಪ ರೆಡ್ಡಿ ಅಧಿಕಾರ ಸ್ವೀಕರಿಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ ನೂತನ ಕಮಿಷ್ನರ್ ಪ್ರತಾಪ್ ರೆಡ್ಡಿಯವರಿಗೆ ಬ್ಯಾಟನ್ ಹಸ್ತಾಂತರಿಸಿದರು. ಬ್ಯಾಟನ್ ಸ್ವೀಕರಿಸುವ ಮೂಲಕ ಪ್ರತಾಪ ರೆಡ್ಡಿ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿರುವ ಸಿ.ಹೆಚ್.ಪ್ರತಾಪ ರೆಡ್ಡಿ ಆಂಧ್ರಪ್ರದೇಶದ ಗುಂಟೂರು ಮೂಲದವರು. 1991ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಪ್ರತಾಪ ರೆಡ್ಡಿ, ಕಲಬುರ್ಗಿ, ಬಿಜಾಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿಯೂ ಕೆಲಸ ನಿರ್ವಹಿಸಿರುವ ಪ್ರತಾಪ್ ರೆಡ್ಡಿ ಇದೀಗ ಬೆಂಗಳೂರು ಕಮಿಷ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ