ಬೆಂಗಳೂರು: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಅವರು ಗುಡ್ ಬೈ ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಪ್ರಸ್ತುತ ರೈಲ್ವೆ ಇಲಾಖೆಯ ಎಡಿಜಿಪಿಯಾಗಿ ಭಾಸ್ಕರ್ ರಾವ್ ಕಾರ್ಯನಿರ್ವಹಿಸುತ್ತಿದ್ದರು.
ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಅವರು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡಲಾಗಿದ್ದು, ಗೃಹಸಚಿವಾಲಯವು ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಬೇಕಿತ್ತು. ಆದರೆ, 6 ತಿಂಗಳಾದರೂ ಸಚಿವಾಲಯದಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2) ನಡಿ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ ಹೇಳಿದ್ದಾರೆ.
ಆಕ್ಟ್ ಪ್ರಕಾರ ನಿವೃತ್ತಿ ಕೋರಿದ ಅಧಿಕಾರಿ ವಯಸ್ಸು 50 ವರ್ಷ ದಾಟಿರಬೇಕು. 20 ವರ್ಷ ಸೇವೆಯನ್ನು ಪೂರ್ಣಗೊಳಿಸಬೇಕು. ನಿವೃತ್ತಿಗೆ ಮನವಿ ಸಲ್ಲಿಸುವಾಗ ಅಮಾನತಿನಲ್ಲಿ ಇರಬಾರದು. ಭಾಸ್ಕರ್ ರಾವ್ ಅವರು ಕಾಯ್ದೆಯಡಿ ನಿವೃತ್ತಿಗೆ ಅರ್ಹರಿರುವ ಕಾರಣ ಅಧಿಕೃತವಾಗಿ ಸೇವೆಗೆ ಗುಡ್ ಬೈ ಹೇಳಿದ್ದಾರೆನ್ನಲಾಗಿದೆ.