ವಿದೇಶದ ದೊಡ್ಡ ನೌಕರಿ ತ್ಯಜಿಸಿ ತನ್ನೂರಿಗೆ ಬಂದು ಅಲ್ಲಿನ ಜನರ ಜೀವನಗಳಲ್ಲಿ ಬದಲಾವಣೆ ತರುವ ನಾಯಕನ ಕಥೆಯಾದ ’ಸ್ವದೇಸ್’ ಸಿನೆಮಾ ಇಂದಿಗೂ ಸಹ ದೇಶವಾಸಿಗಳಿಗೆ ಭಾರೀ ಇಷ್ಟ. ಈ ಚಿತ್ರವನ್ನು ನೋಡಿ ತಾವೂ ಸಹ ತಮ್ಮೂರು, ತಮ್ಮ ಜನಕ್ಕೆ ಕೈಲಾದ ಮಟ್ಟಿಗೆ ಏನಾದರೊಂದು ಒಳಿತು ಮಾಡುವ ಆಶಯ ಮೂಡುತ್ತಿದೆ.
ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯೊಬ್ಬರು ವೃದ್ಧೆಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿಕೊಡುವ ಮೂಲಕ ತಾವೂ ’ಸ್ವದೇಸ್’ ಚಿತ್ರವನ್ನು ನೆನಪಿಸುತ್ತಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹ್ರ್ ಪ್ರದೇಶದಲ್ಲಿ ಸ್ವತಂತ್ರ‍್ಯ ಬಂದು 76 ವರ್ಷಗಳಾದರೂ ಸಹ ಇನ್ನೂ ವಿದ್ಯುತ್ ಸಂಪರ್ಕ ಕಾಣದೇ ಇರುವ ಮನೆಯೊಂದರಲ್ಲಿ 70 ವರ್ಷದ ನೂರ್ ಜಹಾನ್ ಎಂಬ ಮಹಿಳೆ ವಾಸಿಸುತ್ತಿದ್ದರು. ಇವರ ಪರಿಸ್ಥಿತಿಯನ್ನು ಕಂಡ 2020ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅನುಕೃತಿ ಶರ್ಮಾ ಆಕೆಯ ಮನೆಗೆ ವಿದ್ಯುತ್ ಸಂಪರ್ಕ ಪೂರೈಸಿದ್ದನ್ನು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ.
“ನನ್ನ ಜೀವನದ ಸ್ವದೇಸ್ ಘಳಿಗೆ. ನೂರ್‌ಜಹಾನ್ ಆಂಟಿಯವರ ಮನೆಗೆ ಬೆಳಕಿನ ವ್ಯವಸ್ಥೆ ಮಾಡಿದ್ದು ಆಕೆಯ ಜೀವನಕ್ಕೆ ಬೆಳಕು ಕೊಟ್ಟ ಅನುಭವದಂತೆ ಭಾಸವಾಯಿತು. ಆಕೆಯ ಮೊಗದಲ್ಲಿನ ನಗು ಬಹಳ ಸಂತೃಪ್ತದಾಯಕವಾಗಿತ್ತು. ಈ ಕಾರ್ಯಕ್ಕೆ ಬೆಂಬಲ ಕೊಟ್ಟ ಠಾಣಾಧಿಕಾರಿ ಜಿತೇಂದ್ರ ಜೀ ಹಾಗೂ ಇತರ ನಾಲ್ವರಿಗೆ ಧನ್ಯವಾದ,” ಎಂದು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ ಅನುಕೃತಿ.