2022ರ ಆರಂಭಕ್ಕೆ ಇನ್ನೊಂದು ದಿನ ಬಾಕಿಯಿದೆ. ಹೊಸ ವರ್ಷ ಆರಂಭವಾಗ್ತಿದ್ದಂತೆ ಅನೇಕ ಬದಲಾವಣೆಯಾಗಲಿದೆ. ಅದ್ರಲ್ಲಿ ಬ್ಯಾಂಕ್ ನಿಯಮಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ ವರ್ಷ ಹೆಚ್ಚಿನ ಹೊರೆ ಬೀಳಲಿದೆ. ಅಂಚೆ ಖಾತೆದಾರರು ಮಿತಿಗಿಂತ ಹೆಚ್ಚು ಹಣ ಪಡೆಯಲು ಹಾಗೂ ಠೇವಣಿ ಮಾಡಲು ಶುಲ್ಕ ಪಾವತಿ ಮಾಡಬೇಕಿದೆ. ಜನವರಿ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಮೂಲ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ನಾಲ್ಕು ಬಾರಿ ನಗದನ್ನು ಉಚಿತವಾಗಿ ಹಿಂಪಡೆಯಬಹುದು.
ಅದರ ನಂತರ ಗ್ರಾಹಕರು ಪ್ರತಿ ವಿತ್ ಡ್ರಾಗೆ ಕನಿಷ್ಠ 25 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಮೂಲ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ಶುಲ್ಕವಿರುವುದಿಲ್ಲ. ಆದ್ರೆ ಉಳಿದ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಒಂದು ತಿಂಗಳಲ್ಲಿ 10,000 ರೂಪಾಯಿಗಳನ್ನು ಉಚಿತವಾಗಿ ಠೇವಣಿ ಮಾಡಬಹುದು. ಈ ಮಿತಿಗಿಂತ ಹೆಚ್ಚು ಠೇವಣಿ ಇಟ್ಟರೆ ಗ್ರಾಹಕರು ಶುಲ್ಕ ಭರಿಸಬೇಕು.
ಹಾಗೆ ಮೂಲ ಉಳಿತಾಯ ಖಾತೆಯನ್ನು ಹೊರತುಪಡಿಸಿ, ಇತರ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಿಂದ ಪ್ರತಿ ತಿಂಗಳು 25,000 ರೂಪಾಯಿಗಳನ್ನು ಉಚಿತವಾಗಿ ಹಿಂಪಡೆಯಬಹುದು. ಉಚಿತ ಮಿತಿಯ ನಂತರ ಪ್ರತಿ ಬಾರಿ ಹಣವನ್ನು ಹಿಂಪಡೆಯಲು ಕನಿಷ್ಠ 25 ರೂಪಾಯಿ ಪಾವತಿಸಬೇಕಾಗುತ್ತದೆ.