ಈ ಬಾರಿಯ ಐಪಿಎಲ್ ಟೂರ್ನಮೆಂಟ್ ಪೂರ್ಣಗೊಂಡಿದ್ದು, ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ತಮ್ಮ ತಂಡ ಐಪಿಎಲ್ ಟ್ರೋಫಿ ಗೆಲ್ಲುತ್ತಲೇ ಆನಂದ ಸಾಗರದಲ್ಲಿ ಮುಳುಗಿದ್ದ ನಟ ಶಾರುಖ್, ಮತ್ತೊಂದು ಅವಧಿಗೆ ಗೌತಮ್ ಗಂಭೀರ್ ಅವರನ್ನೇ ತಮ್ಮ ತಂಡದ ಕೋಚ್ ಆಗಿ ಮುಂದುವರಿಸಲು ಬಯಸಿದ್ದಾರೆ.
ಕ್ರಿಕೆಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಆಟವಾಗಿದ್ದು , ಹಣದ ಸುರಿಮಳೆಯೇ ಹರಿದು ಬರುತ್ತದೆ. ಅದರಲ್ಲೂ ಐಪಿಎಲ್ ಟೂರ್ನಿ ಭಾರಿ ಯಶಸ್ಸು ಗಳಿಸಿದ್ದು, ಈ ಟೂರ್ನಿಯಲ್ಲಿ ಗೆಲ್ಲುವ ತಂಡಕ್ಕೆ 20 ಕೋಟಿ ರೂಪಾಯಿ ಸಿಗುವುದಾದರೆ ಆಟಗಾರರ ಖರೀದಿಗೆ ಪ್ರಾಂಚೈಸಿಗಳು ನೂರು ಕೋಟಿ ಹೆಚ್ಚು ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಅದರ ಮೀಡಿಯಾ ಹಕ್ಕುಗಳನ್ನು ಹರಾಜು ಹಾಕಲಾಗುತ್ತದೆ. ದೃಶ್ಯ ಮತ್ತು ಮುದ್ರಣ ಮಾಧ್ಯಮದ ಈ ಹರಾಜಿನಿಂದ ಬಹುದೊಡ್ಡ ಮೊತ್ತ ಹರಿದು ಬರುತ್ತದೆ. 2024 ರಿಂದ 2027 ರ ವರೆಗಿನ ಮೀಡಿಯಾ ಹಕ್ಕುಗಳು (ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ) 48,390 ಕೋಟಿ ರೂಪಾಯಿಗಳಿಗೆ ಹರಾಜಾಗಿದೆ ಅಂದರೆ ಇದರ ಅಗಾಧತೆಯನ್ನು ಊಹಿಸಬಹುದಾಗಿದೆ.
ಈ ಅವಧಿಯ ಟಿವಿ ರೈಟ್ಸ್ ಅನ್ನು ಡಿಸ್ನಿ ಸ್ಟಾರ್ ಪಡೆದುಕೊಂಡಿದ್ದು, ಇದಕ್ಕಾಗಿ ಹರಾಜಿನಲ್ಲಿ 2,575 ಕೋಟಿ ರೂಪಾಯಿ ಪಾವತಿಸಿದೆ. ಅಂದರೆ ಪ್ರತಿ ಪಂದ್ಯಕ್ಕೂ 57.5 ಕೋಟಿ ರೂಪಾಯಿ. ಇನ್ನು ಡಿಜಿಟಲ್ ರೈಟ್ಸ್ ಅನ್ನು Viacom 18 ಪಡೆದುಕೊಂಡಿದ್ದು ಇದಕ್ಕಾಗಿ ಹರಾಜಿನಲ್ಲಿ 23,578 ಕೋಟಿ ರೂಪಾಯಿ ಪಾವತಿಸಿದೆ. ಇದರ ಜೊತೆಗೆ ಜಿಯೋ ಸಿನಿಮಾ ಕೂಡ ಪಂದ್ಯಗಳನ್ನು ಲೈವ್ ಆಗಿ ಪ್ರಸಾರ ಮಾಡಿದ್ದು, ಆ ಸಂಸ್ಥೆಗೆ ಜಾಹೀರಾತಿನಿಂದ ನೂರಾರು ಕೋಟಿ ರೂಪಾಯಿ ಲಾಭ ಬಂದಿದೆ.
ಇಷ್ಟೇ ಅಲ್ಲ, ತಂಡಗಳನ್ನು ಪ್ರಾಯೋಜಿಸಲು ದೊಡ್ಡ ದೊಡ್ಡ ಕಂಪನಿಗಳು ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದೆ ಬರುತ್ತವೆ. ಆಟಗಾರರ ಕ್ಯಾಪ್, ಶೂಸ್, ವಿಕೆಟ್, ಬ್ಯಾಟ್ ಇವುಗಳ ಮೇಲೆಲ್ಲಾ ಪ್ರಾಯೋಜಕತ್ವ ವಹಿಸುವ ಕಂಪನಿಗಳ ಲೋಗೋ, ಜಾಹೀರಾತು ರೂಪದಲ್ಲಿ ಇರುತ್ತದೆ. ಇದರ ಜೊತೆಗೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ತಂಡಗಳ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕವೂ ಪ್ರಾಯೋಜಕರ ಜಾಹೀರಾತು ಪ್ರಮೋಟ್ ಮಾಡಲಾಗುತ್ತದೆ.
ಇನ್ನು ಫ್ರಾಂಚೈಸಿ ತಂಡಗಳಿಗೆ ತಮ್ಮ ತವರು ನೆಲದಲ್ಲಿ ಏಳು ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದ್ದು, ಅಂತಹ ತಂಡಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಣೆಗೆ ಬರುವ ಕಾರಣ ಟಿಕೆಟ್ ಶುಲ್ಕದ ಹಣವು ಸಹ ಫ್ರಾಂಚೈಸಿ ತಂಡಗಳಿಗೆ ಲಾಭ ತರುತ್ತದೆ. ಒಟ್ಟಿನಲ್ಲಿ ಐಪಿಎಲ್ ಟೂರ್ನಿ ಎಂಬುದು ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು, ಹೀಗಾಗಿಯೇ ದೊಡ್ಡ ದೊಡ್ಡ ಉದ್ಯಮಿಗಳು ಐಪಿಎಲ್ ತಂಡಗಳ ಖರೀದಿಗೆ ಮುಗಿ ಬೀಳುತ್ತಾರೆ. ಜೊತೆಗೆ ತಾವು ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟಿಗಿಂತ ಜಾಸ್ತಿ ಮರಳಿ ಪಡೆಯುತ್ತಾರೆ.