ಮಂಡ್ಯ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಗೆದ್ದ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋರಾಪುರ ಸಮೀಪ ವಿ.ಸಿ. ನಾಲೆ ಬಳಿ ಗುರುವಾರ ರಾತ್ರಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕರಸಿನಕೆರೆಯ ಪುನೀತ್(28) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಚಿಕ್ಕರಸಿನಕೆರೆಯ ದರ್ಶನ್ ಮತ್ತು ಬೋರಾಪುರದ ಶರತ್ ಐಪಿಎಲ್ ಬೆಟ್ಟಿಂಗ್ ಕಟ್ಟುತ್ತಿದ್ದು, ಇದರಲ್ಲಿ ದರ್ಶನ್ ಗೆದ್ದಿದ್ದ. ಶರತ್ 11,000 ರೂ.ಗಳನ್ನು ದರ್ಶನ್ ಗೆ ಕೊಡಬೇಕಿತ್ತು.
ಆದರೆ ಶರತ್ ಹಣ ಕೊಡದೆ ಸತಾಯಿಸುತ್ತಿದ್ದ ಕಾರಣ ತನ್ನ ಸ್ನೇಹಿತ ಪುನೀತ್ ಗೆ ದರ್ಶನ್ ಕೇಳಿಕೊಂಡಿದ್ದಾನೆ. ಶರತ್ ಗೆ ಕರೆ ಮಾಡಿದ ಪುನೀತ್ ಹಣ ಕೊಡುವಂತೆ ಹೇಳಿದ್ದು, ಹುಲಿಗೆರೆಪುರ ರಸ್ತೆಯ ವಿ.ಸಿ. ನಾಲೆ ಬಳಿಗೆ ಆರೋಪಿಗಳು ಇಬ್ಬರನ್ನು ಕರೆಸಿಕೊಂಡು ಜಗಳವಾಡಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪುನೀತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.