ಐಪಿಎಲ್ 2025ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸುವ ಕಾರ್ಯಕ್ಕೆ ಮತ್ತೊಮ್ಮೆ ಯಶಸ್ಸು ಸಿಕ್ಕಿದೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಮುಂಬೈ ಇಂಡಿಯನ್ಸ್‌ನ ಋತುವಿನ ಆರಂಭಿಕ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಸ್ಮರಣೀಯ ಪಾದಾರ್ಪಣೆ ಮಾಡಿದ್ದರೆ, ಸೋಮವಾರ ನಡೆದ ತಂಡದ ಮೊದಲ ತವರಿನ ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಅಶ್ವಿನಿ ಕುಮಾರ್ ಮಿಂಚಿದ್ದಾರೆ.
ಪಂಜಾಬ್ ಪರ ಎರಡು ರಣಜಿ ಟ್ರೋಫಿ (2022 ರಲ್ಲಿ ಕೊನೆಯದು), ಮೂರು ವಿಜಯ್ ಹಜಾರೆ ಟ್ರೋಫಿ (2022 ರಲ್ಲಿ ಕೊನೆಯದು) ಮತ್ತು ನಾಲ್ಕು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ (2024 ರಲ್ಲಿ ಎಲ್ಲವೂ) ಅಶ್ವಿನಿ ಆಡಿದ್ದರೂ, ಯಾವುದೇ ಮಾದರಿಯಲ್ಲಿ ಮೂರಕ್ಕಿಂತ ಹೆಚ್ಚು ವಿಕೆಟ್ ಪಡೆದಿರಲಿಲ್ಲ.
ಆದರೆ ಸೋಮವಾರ, ಅವರು ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು, ಐಪಿಎಲ್‌ನ ಕೆಲವು ದೊಡ್ಡ ಹೆಸರುಗಳ ವಿಕೆಟ್‌ಗಳನ್ನು ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್‌ಗಳು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 116 ರನ್‌ಗಳಿಗೆ ಆಲೌಟ್ ಮಾಡಿದರು. ಇದರಲ್ಲಿ ಅಶ್ವಿನಿ ಪ್ರಮುಖ ಪಾತ್ರವಹಿಸಿದರು.
ಕಳೆದ ವರ್ಷದ ಶೇರ್-ಎ-ಪಂಜಾಬ್ ಟ್ರೋಫಿಯಲ್ಲಿ ಅಶ್ವಿನಿ ಅವರ ನಿಖರತೆ ಮತ್ತು ನಿರಂತರವಾಗಿ ವೈಡ್ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್‌ನ ಸ್ಕೌಟ್‌ಗಳು ಗುರುತಿಸಿದ್ದರು. ಪಂಜಾಬ್‌ಗೆ ಬ್ಯಾಕ್-ಅಪ್ ವೇಗಿಯಾಗಿ ಅಶ್ವಿನಿ ಕುಮಾರ್ ಗುರುತಿಸಿಕೊಂಡಿದ್ದರು. ಕಳೆದ ವರ್ಷ ಜೆಡ್ಡಾದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕರು ಅಶ್ವಿನಿಯನ್ನು ತಂಡಕ್ಕೆ ಸೇರಿಸಿಕೊಂಡರು.
ಸೋಮವಾರ ಅಶ್ವಿನಿ ತಮ್ಮ ಮೊದಲ ಎಸೆತದಲ್ಲೇ ಅಜಿಂಕ್ಯ ರಹಾನೆ ಅವರ ವಿಕೆಟ್ ಪಡೆದಿದ್ದು, ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಹಾರ್ ತಮ್ಮ ಮೊದಲ ಓವರ್‌ಗಳಲ್ಲಿ ಕೆಕೆಆರ್‌ನ ಇಬ್ಬರು ಆರಂಭಿಕರನ್ನು ಔಟ್ ಮಾಡಿದ ನಂತರ ನಾಯಕ ಅಜಿಂಕ್ಯ ರಹಾನೆ ಅವರ ಮೇಲೆ ಕೆಕೆಆರ್‌ನ ಭರವಸೆಗಳಿದ್ದವು. ಆದರೆ ಅಶ್ವಿನಿ ಎಸೆದ ನಾಲ್ಕು ಓವರ್‌ಗಳ ಮೊದಲ ಎಸೆತವು ಆಫ್ ಸ್ಟಂಪ್‌ನ ಹೊರಗೆ ಪಿಚ್ ಆಗಿದ್ದು, ರಹಾನೆ ಅದನ್ನು ಸ್ಲೈಸ್ ಮಾಡಿದರು ಮತ್ತು ತಿಲಕ್ ವರ್ಮಾ ಎರಡನೇ ಪ್ರಯತ್ನದಲ್ಲಿ ಕ್ಯಾಚ್ ಪಡೆದರು.
ಅಶ್ವಿನಿ ಮತ್ತೆ ಬೌಲಿಂಗ್‌ಗೆ ಬಂದಾಗ 11ನೇ ಓವರ್‌ನಲ್ಲಿ ರಿಂಕು ಸಿಂಗ್ ಮತ್ತು ಮನೀಶ್ ಪಾಂಡೆ ಅವರ ವಿಕೆಟ್ ಪಡೆದರು. ನಂತರದ ಓವರ್‌ನಲ್ಲಿ ಆಂಡ್ರೆ ರಸೆಲ್ ಅವರ ವಿಕೆಟ್ ಪಡೆದರು. ಇದರೊಂದಿಗೆ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದರು.