ತಮ್ಮ ಪ್ರತಿಭೆಯಿಂದಲೇ ದೊಡ್ಡ ಹೆಸರು ಮಾಡುವ ಕನಸು ಹೊಂದಿರುವ ಅಸಂಖ್ಯ ಕೆಳ/ಮಧ್ಯಮ ವರ್ಗದ ಹುಡುಗರ ಆಶಾ ಕಿರಣವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ರೋಚಕ ಆಟವೊಂದರ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು ಕಡೆಯ ಐದು ಎಸೆತಗಳಲ್ಲಿ 28 ರನ್‌ಗಳು ಬೇಕಿದ್ದ ವೇಳೆ ಸತತ ಐದು ಸಿಕ್ಸ್ ಸಿಡಿಸಿ ತಮ್ಮ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟಿದ್ದರು ರಿಂಕು.
ರಿಂಕು ತಂದೆ ಎಲ್‌ಪಿಜಿ ಸಿಲಿಂಡರ್‌ಗಳ ಡೆಲಿವರಿ ಮಾಡುತ್ತಿದ್ದರು. ಬಾಲ್ಯದಲ್ಲಿ ಭಾರೀ ಆರ್ಥಿಕ ಸಂಕಷ್ಟದ ದಿನಗಳನ್ನು ಕಂಡ ರಿಂಕು, ಕ್ರಿಕೆಟ್ ಮೇಲಿನ ಬದ್ಧತೆ ಹಾಗೂ ಶ್ರದ್ಧೆಯಿಂದಲೇ ಇಂದು ಈ ಮಟ್ಟ ತಲುಪಿದ್ದಾರೆ.
2017ರಲ್ಲಿ ರಿಂಕುರನ್ನು ಅವರ ಮೂಲ ಬೆಲೆ 10 ಲಕ್ಷ ರೂ. ಕೊಟ್ಟು ಖರೀದಿಸಿತ್ತು ಪಂಜಾಬ್ ಕಿಂಗ್ಸ್ ತಂಡ. ಮುಂದಿನ ಸೀಸನ್‌ನಲ್ಲಿ ಕೆಕೆಆರ್ ತಂಡ ಸೇರಿಕೊಂಡ ರಿಂಕು, 80 ಲಕ್ಷ ರೂ.ಗಳಿಗೆ ಹರಾಜುಗೊಂಡಿದ್ದರು. ಇದೀಗ ಜೀವನದ ಸುವರ್ಣ ದಿನಗಳನ್ನು ನೋಡುತ್ತಿರುವ ರಿಂಕು ತಮ್ಮಂತೆಯೇ ಸಾಧನೆ ಮಾಡಲು ಹಾತೊರೆಯುತ್ತಿರುವ ಕಿರಿಯ ಕ್ರಿಕೆಟರ್ ಗಳಿಗೆ ನೆರವಾಗಲು ಮುಂದಾಗಿದ್ದಾರೆ.
ಎಳೆಯ ಕ್ರಿಕೆಟಿಗರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವ ಅಲಿಘಡದ ಹಾಸ್ಟೆಲ್ ಒಂದಕ್ಕೆ 50 ಲಕ್ಷ ರೂ.ಗಳನ್ನು ಕೊಡಲು ಮುಂದಾಗಿದ್ದಾರೆ ರಿಂಕು. ಅಲಿಘಡ ಕ್ರಿಕೆಟ್ ಸ್ಕೂಲ್ ಮತ್ತು ಅಕಾಡೆಮಿ ಅಂಗಳದಲ್ಲಿ ಈ ಹಾಸ್ಟೆಲ್ ಅನ್ನು ನಿರ್ಮಿಸಲಾಗುಗತ್ತಿದೆ.
“ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಆರ್ಥಿಕ ಚೈತನ್ಯ ಇಲ್ಲದ ಕಿರಿಯ ಆಟಗಾರರಿಗೆ ನೆರವಾಗಬೇಕೆಂದು ರಿಂಕು ಸದಾ ಬಯಸಿದ್ದರು. ಈಗ ಆತ ಅದನ್ನು ಸಾಕಾರಗೊಳಿಸಲು ಮುಂದಾಗಿದ್ದಾನೆ,” ಎಂದು ರಿಂಕುಗೆ ಬಾಲ್ಯದಲ್ಲಿ ತರಬೇತಿ ನೀಡಿದ್ದ ಕೋಚ್ ಮಸೂದ್-ಝಾಫರ್- ಅಮಿನಿ ತಿಳಿಸಿದ್ದಾರೆ.