ಅತ್ಯಂತ ಕಟ್ಟರ್ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 10 ತಿಂಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಕಾತರ ಹಾಗೂ ಸಂತಸ ಮೂಡಿಸಿದೆ.
ಅಹಮದಾಬಾದ್‌ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಆಡಲು ಕಣಕ್ಕಿಳಿಯುವ ದಿನಗಳ ಮುಂಚಿನಿಂದಲೇ ಧೋನಿ ಜ್ವರ ವಿಪರೀತ ಆಗಿತ್ತು.
ತಮ್ಮ ಶಾಂತಚಿತ್ತತೆ ಹಾಗೂ ಆಟದಂಗಳದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಚತುರ ತಂತ್ರಗಾರಿಕೆಗಳಿಂದ ಕ್ರಿಕೆಟ್ ಪ್ರಿಯರ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ಧೋನಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಆಗುತ್ತಿದ್ದಾರೆ. ಟೀಂ ಇಂಡಿಯಾಗೆ ಮೂರು ವರ್ಷಗಳ ಹಿಂದೆಯೇ ನಿವೃತ್ತಿ ಘೋಷಿಸಿರುವ ಕಾರಣ ಧೋನಿಯವರ ಆಟವನ್ನು ಈಗ ಐಪಿಎಲ್‌ನಲ್ಲಿ ಮಾತ್ರವೇ ನೋಡಲು ಸಾಧ್ಯ.
ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ರೋಚಕ ಸೋಲು ಕಂಡರೂ ಸಹ, 41ರ ಹರೆಯದ ಧೋನಿ ಮೈದಾನದಲ್ಲಿ ತೋರಿದ ಚುರುಕುತನ ಹಾಗೂ ಬ್ಯಾಟಿಂಗ್ ಆಡುವ ವೇಳೆ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ್ದಕ್ಕೇ ಅವರ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.
ಈ ಟೂರ್ನಿ ಧೋನಿಯವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದ್ದು, ಧೋನಿ ಆಡುವ ಪ್ರತಿಯೊಂದು ಪಂದ್ಯದಲ್ಲೂ ಅವರಿಗೆ ಅಭಿಮಾನಿಗಳ ಕರತಾಡನ ಜೋರಾಗಿಯೇ ಇರಲಿದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?