
ನಾಲ್ಕು ವರ್ಷಗಳ ಸುದೀರ್ಘಾವಧಿ ಬಳಿಕ ತಮ್ಮ ’ತವರಿಗೆ’ ಆಗಮಿಸಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಜನತೆ ಅಭೂತ ಪೂರ್ವ ಸ್ವಾಗತ ಕೋರಿದ್ದಾರೆ.
ಐಪಿಎಲ್ 2023ಯ ಆರನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಚೆಪಾಕ್ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ತಂಡದ ಸಾರಥ್ಯ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿಯನ್ನು ಕಾಣಲು ಅಭಿಮಾನಿಗಳು ಬಲೇ ಕಾತರದಿಂದ ಬಂದಿದ್ದರು. ಸಿಎಸ್‌ಕೆ ಅಭಿಮಾನಿಗಳು ತಮ್ಮ ಮೆಚ್ಚಿನ ’ತಲಾ’ ಧೋನಿರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಸೋಮವಾರದ ಪಂದ್ಯದ ವೇಳೆ ಮೊದಲು ಬ್ಯಾಟ್ ಮಾಡಿದ ಚೆನ್ನೈನ ಇನಿಂಗ್ಸ್‌ನ 19ನೇ ಓವರ್ ಆದರೂ ಧೋನಿ ಬ್ಯಾಟಿಂಗ್‌ಗೆ ಬಾರದೇ ಇದ್ದಿದ್ದನ್ನು ಕಂಡ ಅಭಿಮಾನಿಗಳು, ಶಿವಂ ದುಬೆಗೆ, “ಔಟಾಗಪ್ಪಾ ಮೊದಲು!” ಎನ್ನುವ ಮೂಲಕ ತಮ್ಮ ಮೆಚ್ಚಿನ ತಲಾ ಒಂದೆರಡು ಚೆಂಡಿನ ಮಟ್ಟಿಗಾದರೂ ಬ್ಯಾಟಿಂಗ್ ಆಡುವುದನ್ನು ನೋಡಲು ಅದೆಷ್ಟು ಉತ್ಸುಕರಾಗಿ ಕಾಯುತ್ತಿರುವೆವೆಂದು ಚೆಪಾಕ್ ಅಭಿಮಾನಿಗಳು ತೋರಿಸಿಕೊಂಡಿದ್ದಾರೆ.
1,426 ದಿನಗಳ ಬಳಿಕ ಚೆಪಾಕ್‌ನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಆಡಲಿಳಿದ ಧೋನಿ, ಇನಿಂಗ್ಸ್‌ನ 20ನೇ ಓವರ್‌ನ ಮೊದಲ ಹಾಗೂ ಎರಡನೇ ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿದ್ದಾರೆ. ಮೊದಲೇ ತಲಾರನ್ನು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಧೋನಿರ ಬ್ಯಾಟ್‌ನಿಂದ ಸಿಡಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳು ಭಾರೀ ಖುಷಿ ನೀಡಿದವು. ಆದರೆ ಮೂರನೇ ಎಸೆತದಲ್ಲಿ ಮತ್ತೊಂದು ಬಿರುಸಿನ ಹೊಡೆತಕ್ಕೆ ಮುಂದಾದ ವೇಳೆ ಔಟ್ ಆಗಿ ಪೆವಿಲಿಯನ್‌ಗೆ ನಿರ್ಗಮಿಸಿದರು ಧೋನಿ.
ಬಳಿಕ ಫೀಲ್ಡಿಂಗ್‌ನಲ್ಲೂ ತಮ್ಮ ಸ್ಪಿನ್ನರ್‌ಗಳನ್ನು ಬಹಳ ಚೆನ್ನಾಗಿ ಬಳಸಿಕೊಂಡ ತಲಾ, ಗೆಲುವಿನ ಗುರಿಯನ್ನು 15-16 ಓವರ್‌ಗಳಲ್ಲಿ ತಲುಪುವ ಲಕ್ಷಣಗಳನ್ನು ತೋರಿದ್ದ ಲಖನೌ ತಂಡದ ನಾಗಾಲೋಟಕ್ಕೆ ಕಡಿವಾಣ ಹಾಕಿ ಕೊನೆಗೂ ತಮ್ಮ ತಂಡಕ್ಕೆ 12 ರನ್ ಗೆಲುವು ತಂದುಕೊಡಲು ಸಫಲರಾಗಿದ್ದಾರೆ.
ತನ್ಮೂಲಕ, ಬಹಳ ಸಮಯದ ನಂತರ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವಿನ ಸವಿ ಕಂಡಿದೆ ಸಿಎಸ್‌ಕೆ.